Yellapur| ಗಾಂಜಾ ಅಮಲಿನಲ್ಲಿ ಅಲೆದಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯಲಾಪುರದ ಉಮ್ಮಚಗಿಯ ಜನತಾ ಕಾಲೋನಿ ನಿವಾಸಿ ಚಂದನ್ ಹನುಮಂತ ಹರಿಕಂತ್ರ ಹಾಗೂ ಚವತಿಯ ಪ್ರಮೋದ್ ಅಶೋಕ್ ಶೇರುಗಾರ ಬಂಧಿತ ಆರೋಪಿಗಳು.
ಆರೋಪಿಗಳು ಯಲ್ಲಾಪುರ ತಾಲೂಕಿನ ವೈ.ಟಿ.ಎಸ್.ಎಸ್ (YTSS) ಶಾಲೆಯ ಬಳಿ ಗಾಂಜಾ ಅಮಲಿನಲ್ಲಿ ತೂರಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಕೂಡಲೇ ಈ ಗಾಂಜಾ ವ್ಯಸನಿ ಯುವಕರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿದಾಗ ಇವರು ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಆ ಹಿನ್ನೆಲೆ ಇಬ್ಬರನ್ನು ಬಂಧಿಸಿ ಎನ್.ಡಿ.ಪಿ.ಎಸ್ ಆ್ಯಕ್ಟ್ (Narcotic Drugs and Psychotropic Substances Act) ಅಡಿಯಲ್ಲಿ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಗೆ ಹೊರ ಜಿಲ್ಲೆಗಳಿಂದ ಗಾಂಜಾ ಪೂರೈಕೆಯಾಗುತ್ತಿದ್ದು, ಯುವಕರೇ ಹೆಚ್ಚಾಗಿ ಇದರ ದಾಸರಾಗುತ್ತಿದ್ದಾರೆ. ಶಾಲಾ, ಕಾಲೇಜು ವ್ಯಾಪ್ತಿಯಲ್ಲಿ ಚಾಕಲೇಟು ಮಿಶ್ರಣದೊಂದಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಪೊಲೀಸರು ಈ ಬಗ್ಗೆ ಇನ್ನಷ್ಟು ಹೆಚ್ಚಿನ ಗಮನ ಹರಿಸಬೇಕಿದೆ.
