Bhatkal| ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆ ಇಡಲಾಗುತ್ತಿರುವ ಮೂಲ ಸ್ಥಳಕ್ಕೆ ಯಾವುದೇ ಹಾನಿಯಾಗಿಲ್ಲ, ಯಥಾಸ್ಥಿತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸ್ಪಷ್ಟಪಡಿಸಿದ್ದು, ಆದರೆ ಹೊಸದಾಗಿ ಸ್ಥಳಾಂತರಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಕಟ್ಟೆಯನ್ನು ನಾಶಪಡಿಸಿದವರ ಮೇಲೆ ಕಾನೂನಿನಂತೆ ಪ್ರಕರಣಗಳನ್ನು ದಾಖಲಿಸಿಲಾಗಿದೆ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಭಟ್ಕಳ ನಗರ ಮೂಲಕ ಹಾಯ್ದು ಹೋಗುವ ರಾ.ಹೆ.66 ರ ಪಕ್ಕದಲ್ಲಿ ಶಿರಸಿ ಮಾರಿಕಾಂಬೆ ದೇವಸ್ಥಾನಕ್ಕೆ ಹೋಗುವ ಹೊರೆಯನ್ನಿಡುವ ಸ್ಥಳವಿದೆ. ಅದನ್ನು ಸ್ಥಳೀಯವಾಗಿ ಮುರಿನಕಟ್ಟೆ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಸದ್ರಿ ಸ್ಥಳ ರಾ.ಹೆ. 66 ರ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಮಯದಲ್ಲಿ ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದ ಹಾಗೆ ಮುರಿನಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರರವರಿಂದ ROW ವ್ಯಾಪ್ತಿಯಲ್ಲಿ ಲಭ್ಯ ಸರ್ಕಾರಿ ಜಮೀನಿನಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಮೇ. 24 ರಂದು ಕೆಂಪು ಕಲ್ಲಿನಿಂದ ಕಟ್ಟಿದ ಕಟ್ಟೆಯನ್ನು ಯಾರೋ ಕಿಡಿಗೇಡಿಗಳು ಏಕಾ ಏಕಿಯಾಗಿ ನಾಶಪಡಿಸಿದ್ದಾರೆ. ಈ ಮುರಿನ ಕಟ್ಟೆಯು ದೇವಸ್ಥಾನದ ಕಟ್ಟಡವಾಗಿರದೆ ಅಮ್ಮನವರ ಹೊರೆಯನ್ನಿಡುವ ಕಟ್ಟೆ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸಾಂಪ್ರದಾಯಿಕವಾಗಿ ಅಮ್ಮನವರ ಹೊರೆ ಇಡಲಾಗುತ್ತಿರುವ ಮೂಲ ಸ್ಥಳವೂ ಯಥಾಸ್ಥಿತಿಯಲ್ಲಿರುತ್ತದೆ. ಹೊಸದಾಗಿ ಸ್ಥಳಾಂತರಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಕಟ್ಟೆಯನ್ನು ನಾಶಪಡಿಸಿದವರ ಮೇಲೆ ಕಾನೂನಿನಂತೆ ಪ್ರಕರಣಗಳನ್ನು ದಾಖಲಿಸಿಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
