ಅಂಕೋಲಾ: ಪಟ್ಟಣದ ಗುಡಿಗಾರಗಲ್ಲಿಯಲ್ಲಿರುವ ಸುದರ್ಶನ್ ಹೊಟೆಲ್‌ನಲ್ಲಿ ಊಟದ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಕ್ಷಣಾರ್ಧದಲ್ಲೇ ಎರಡು ಗುಂಪಿನ ನಡುವೆ ಗ್ಯಾಂಗ್‌ ಕಾಳಗಕ್ಕೆ ತಿರುಗಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಗುಂಪಿನ ಒಟ್ಟು 11 ಜನರ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳವಾರ ರಾತ್ರಿ ಸುಮಾರು 10.45ರ ವೇಳೆಗೆ ಹೊಟೆಲ್‌ನಲ್ಲಿ ಊಟದ ವಿಚಾರಕ್ಕೆ ಸಂಬಂಧಿಸಿ ಎರಡು ಗುಂಪಿನ ನಡುವೆ ಮೊದಲು ಮಾತಿನ ವಾಗ್ವಾದ ನಡೆದಿದೆ. ಬಳಿಕ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು, ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳದಲ್ಲಿದ್ದವರು ಗಲಾಟೆಯನ್ನು ತಡೆಯಲು ಯತ್ನಿಸಿದರೂ, ಎರಡೂ ಗುಂಪಿನವರು ಪರಸ್ಪರ ಹಲ್ಲೆ ನಡೆಸುವುದನ್ನು ಮುಂದುವರಿಸಿದ್ದರಿಂದ ಕೆಲಕಾಲ ಹೊಟೆಲ್ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಲಾಟೆಯಿಂದ ಅಲ್ಲಿದ್ದ ಗ್ರಾಹಕರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದು, ಕೆಲಕಾಲ ಗೊಂದಲದ ಪರಿಸ್ಥಿತಿ ಉಂಟಾಯಿತು.

ಪ್ರಕರಣದಲ್ಲಿ ನಿರಂಜನ ಗೋವಿಂದ ಹರಿಕಂತ್ರ, ಮನೋಜಕುಮಾರ ಉದಯ ಖಾರ್ವಿ, ಕಿಶೋರ ಚಂದ್ರ ಮೊಗವೀರ, ಸೂರಜ ಗೋಪಾಲ ಹೊಸಕಟ್ಟಾ, ದೀಪಕ ಉದಯ ಹರಿಕಂತ್ರ ಹಾಗೂ ರಂಜನ ಗೋವಿಂದ ಹರಿಕಂತ್ರ ಒಂದು ಗುಂಪಿನವರಾಗಿದ್ದು, ಮತ್ತೊಂದು ಗುಂಪಿನಲ್ಲಿ ಪ್ರಶಾಂತ ಗಣಪತಿ ನಾಯಕ, ಗಣಪತಿ ಬೀರಣ್ಣ ನಾಯಕ, ರಾಘವೇಂದ್ರ ಮಾಸ್ತಿ ಅಂಬಿಗ, ನಾರಾಯಣ ಗುನಗಾ ಮತ್ತು ಸದಾನಂದ ನಾಯ್ಕ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ಉಂಟುಮಾಡಿದ ಆರೋಪದಡಿ ಎರಡೂ ಗುಂಪಿನ ಒಟ್ಟು ಹನ್ನೊಂದು ಜನರ ವಿರುದ್ಧ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.