Case registered at Sirsi Town Police Station|Police Warning|Sirsi|               ಪ್ರಸಿದ್ಧ ಮಾರಿಕಾಂಬಾ ದೇವಿ ದೇವಸ್ಥಾನ ಜಾತ್ರೆಯ ಪ್ರಯುಕ್ತ ಭಕ್ತರಿಂದ ಆನ್‌ಲೈನ್ ಮೂಲಕ ಹಣ ದೋಚುವ ಗ್ಯಾಂಗ್ ಆ್ಯಕ್ಟಿವ್ ಆಗಿರುವುದು ಬೆಳಕಿಗೆ ಬಂದಿದೆ.

“ದೇವಿಯ ಉಡಿ ತುಂಬುವ ಸೇವೆ” ಮತ್ತು “ಪ್ರಸಾದ ಪಡೆಯಿರಿ” ಎಂದು ಆಕರ್ಷಿಸುವ AI ಆಧಾರಿತ ನಕಲಿ ವಿಡಿಯೋ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಪತ್ತೆಯಾಗಿದೆ. ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆಯ ಪ್ರಕಾರ, “Yajmaan (ಯಜಮಾನ)” ಎಂಬ ಹೆಸರಿನ ಖಾತೆ ಮೂಲಕ ಫೆಬ್ರುವರಿ 24ರಂದು ಸಾಮಾಜಿಕ ಜಾಲತಾಣದಲ್ಲಿ ಈ ಜಾಹೀರಾತು ಪ್ರಸಾರವಾಗಿದ್ದು, ಭಕ್ತರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ನಡೆದಿದೆ. ಜಾಹೀರಾತಿನಲ್ಲಿ ದೇವಿಯ ಸೇವೆ ಬುಕ್ ಮಾಡಲು ಲಿಂಕ್ ನೀಡಲಾಗಿದ್ದು, ಹಣ ಪಾವತಿಸಿದರೆ ಪ್ರಸಾದ ಮನೆಗೆ ತಲುಪಿಸಲಾಗುತ್ತದೆ ಎಂದು ಸುಳ್ಳು ಭರವಸೆ ನೀಡಲಾಗಿದೆ.

ಪೊಲೀಸರು ನೀಡಿರುವ ಮಾಹಿತಿಯಂತೆ, ದೇವಸ್ಥಾನದ ಅಧಿಕೃತ ವ್ಯವಸ್ಥೆಗೆ ಹಾಗೂ ಈ ಜಾಹೀರಾತಿಗೆ ಯಾವುದೇ ಸಂಬಂಧವಿಲ್ಲ. AI ತಂತ್ರಜ್ಞಾನ ಬಳಸಿ ದೃಶ್ಯ ಹಾಗೂ ಧ್ವನಿ ರೂಪದಲ್ಲಿ ಭ್ರಮೆ ಉಂಟುಮಾಡುವ ರೀತಿಯಲ್ಲಿ ವಿಡಿಯೋ ಸೃಷ್ಟಿಸಲಾಗಿದ್ದು, ಜನರನ್ನು ಆನ್‌ಲೈನ್ ಮೋಸದ ಜಾಲಕ್ಕೆ ಸೆಳೆಯುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

ಈ ಸಂಬಂಧ ಕ್ರೈಂ ನಂ. 21/2026 ಅಡಿಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 318(4), 66(ಸಿ)(ಡಿ) ಐಟಿ ಕಾಯ್ದೆ ಸೇರಿದಂತೆ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಸಂಬಂಧಿತ ಸಾಮಾಜಿಕ ಜಾಲತಾಣ ಖಾತೆ ಹಾಗೂ ಹಣ ವರ್ಗಾವಣೆ ಮಾರ್ಗಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ದೇವಸ್ಥಾನದ ಸೇವೆಗಳ ಕುರಿತು ಯಾವುದೇ ಮಾಹಿತಿ ಪಡೆಯಲು ಅಧಿಕೃತ ಮೂಲಗಳನ್ನು ಮಾತ್ರ ಬಳಸಬೇಕು ಎಂದು ಪೊಲೀಸ್ ಇಲಾಖೆ ಭಕ್ತರಲ್ಲಿ ಮನವಿ ಮಾಡಿದೆ. ಅನುಮಾನಾಸ್ಪದ ಲಿಂಕ್‌ಗಳು, ವಿಡಿಯೋಗಳು ಅಥವಾ ಸಂದೇಶಗಳನ್ನು ನಂಬಬಾರದು. ಇಂತಹ ನಕಲಿ ಜಾಹೀರಾತುಗಳನ್ನು ಗಮನಿಸಿದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ ಸೈಬರ್ ಕ್ರೈಂ ವಿಭಾಗಕ್ಕೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಮಾರಿಕಾಂಬಾ ಜಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳ ಹೆಸರಿನಲ್ಲಿ ನಡೆಯುವ ಆನ್‌ಲೈನ್ ವಂಚನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಕನ್ನಡ ಜಿಲ್ಲಾ ಪೊಲೀಸ್ ಎಚ್ಚರಿಕೆ ನೀಡಿದೆ.