Karwar| ಭಟ್ಕಳದ ಮೂರಿನಕಟ್ಟೆ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೊಸ್ಟ್‌, ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ದೀಪನ್‌ ಎಂ.ಎನ್ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡಿರುವ ಅವರು, ಮೇ.24 ರಂದು ಕೆಂಪು ಕಲ್ಲಿನಿಂದ ಕಟ್ಟಿದ ಹೊಸಕಟ್ಟೆಯನ್ನು ಕಿಡಿಗೇಡಿಗಳು ಏಕಾಏಕಿಯಾಗಿ ನಾಶಪಡಿಸಿದ್ದಾರೆ. ಈ ಬಗ್ಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಪಿರ್ಯಾದಿಗೆ ಹಲ್ಲೆ ಮಾಡಿ ದರೋಡೆ, ಸಾರ್ವಜನಿಕರ ವಾಹನಗಳ ಅಡೆತಡೆ ಮಾಡಿ ಸಂಚಾರಕ್ಕೆ ತೊಂದರೆ ಹಾಗೂ ಪ್ರಚೋದನಾಕಾರಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಅಪರಾಧಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಇನ್ನು

ಭಟ್ಕಳ ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ, ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಇಂದಿನಿಂದ ಮೇ. 27 ರ ಬೆಳಗ್ಗೆ 6 ಗಂಟೆಯವರೆಗೆ ಕಲಂ 144 ಸಿ.ಆರ್.ಪಿ.ಸಿ ಕರ್ಫ್ಯೂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದ್ದರಿಂದ, ಐದು ಅಥವಾ ಅದಕ್ಕಿಂದ ಹೆಚ್ಚು ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಪ್ರಚೋದನಾಕಾರಿ ಪೊಸ್ಟ್‌ಗಳು, ಸುಳ್ಳು ಸುದ್ದಿಗಳು ಹರಿಬಿಟ್ಟು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಲ್ಲಿ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು ಎಚ್ಚರಿಸಿದ್ದಾರೆ. ಆದ್ದರಿಂದ ಸಾರ್ವಜನಿಕರು ಯಾವುದೇ ವದಂತಿ ಹಾಗೂ ಸುಳ್ಳು ಸುದ್ದಿಗಳ ಬಗ್ಗೆ ಕಿವಿಗೊಡಬಾರದಾಗಿ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.