ಕಾರವಾರ: ಸದಾ ‘ಸೆಲ್ಫ್ ಗೋಲ್’ ಹೊಡೆದುಕೊಳ್ಳುವುದರಲ್ಲಿ ಪರಿಣತಿ ಪಡೆದಂತೆ ಕಾಣಿಸುವ ಶಾಸಕ ಸತೀಶ ಸೈಲ್, ಈ ಬಾರಿ ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ‘ಯೋಗ್ಯತೆ’ ಕುರಿತು ಉಪದೇಶ ನೀಡಿ ಇರಿಸು ಮುರಿಸು ಉಂಟುಮಾಡಿದ ಘಟನೆ  ನಡೆದಿದೆ.

 ಅಭಿವೃದ್ಧಿ ವಿಷಯಗಳ ಕುರಿತು ಪಕ್ಷದ ಕಾರ್ಯಕರ್ತರೊಂದಿಗೆ ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ, ‘ಪಕ್ಷ ಅಧಿಕಾರಕ್ಕೆ ಬಂದು ಸುಮಾರು ಮೂರು ವರ್ಷಗಳಾಗುತ್ತಾ ಬಂದರೂ, ಇವರೆಗೂ ಕಾರ್ಯಕರ್ತರಿಗೆ ಕೆಡಿಎ (ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರ), ನಿಗಮ ಮಂಡಳಿ ಸೇರಿದಂತೆ ಯಾವುದೇ ಹುದ್ದೆಗಳು ನೀಡಿಲ್ಲ ಯಾಕೆ?” ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸೈಲ್, “ಹುದ್ದೆ ಮುಖ್ಯವಲ್ಲ… ಯೋಗ್ಯತೆ ಬೇಕು. ಪೋಸ್ಟ್ ಇಸ್ ನಾಟ್ ಇಂಪಾರ್ಟೆಂಟ್, ಪರ್ಸನಾಲಿಟಿ ಇಸ್ ಇಂಪಾರ್ಟೆಂಟ್’ ಎಂದು ಹೇಳಿ, ಅವರೊಂದಿಗಿದ್ದ ಕಾರ್ಯಕರ್ತರಿಗೇ ಮಾತಿನಲ್ಲೇ ಸಾವಿರ ವ್ಯಾಟ್ ಕರೆಂಟ್ ಶಾಕ್  ನೀಡಿದರು.

ಇದರೊಂದಿಗೆ ಮಾತು ಮುಂದುವರೆಸಿದ ಅವರು, “ನಾನು ಶಾಸಕನಾಗಿದ್ದರೂ ಸಹ ನನ್ನ ಕಾರಿಗೆ ಇವರೆಗೂ ‘MLA’ ಎಂದು ಬೋರ್ಡ್ ಹಾಕಿಕೊಂಡಿಲ್ಲ. ಕಳೆದ ಬಾರಿ ಶಾಸಕನಾಗಿದ್ದಾಗಲೂ ಹಾಕಿಕೊಂಡಿರಲಿಲ್ಲ. ಆದರೆ ಈಗ ಕೆಲವರು ಮಾಜಿಯಾದರೂ ‘ಮಾಜಿ MLA’ ಎಂದು ಕಾರಿಗೆ ಬೋರ್ಡ್ ಹಾಕಿಕೊಳ್ಳುತ್ತಾರೆ” ಎಂದು ಯಾರ ಹೆಸರನ್ನೂ ಹೇಳದೆ ಲೇವಡಿ ಮಾಡಿದರು.

ಒಟ್ಟಾರೆ, ಕಾರ್ಯಕರ್ತರಿಗೆ ಹುದ್ದೆಗಳ ಬಗ್ಗೆ ಸ್ಪಷ್ಟನೆ ನೀಡಬೇಕಿದ್ದ ಸಂದರ್ಭದಲ್ಲಿ, ‘ಯೋಗ್ಯತೆ ಪಾಠ’ ಹೇಳಿದ ಶಾಸಕ ಸೈಲ್ ಅವರ ಮಾತುಗಳು ಕಾರ್ಯಕರ್ತರಲ್ಲೇ ಹೊಸ ಚರ್ಚೆಗೆ ಕಾರಣವಾಗಲಿದೆಯೇ‌ ಎಂಬುದು ಕಾದು ನೋಡಬೇಕಿದೆ.