Karwar| ಅಂಕೋಲಾ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಆಡಿಟ್ ಮಾಡಲು ಬಂದ ಉನ್ನತ ಶಿಕ್ಷಣ ಇಲಾಖೆಯ ಅಡಿಟ್ ಅಧಿಕಾರಿ 80 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದ ಆಕೌಂಟ್ ಸೂಪರಿಂಟೆಂಡೆಂಟ್ ರಘುನಂದನ್ ಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಉನ್ನತ ಶಿಕ್ಷಣ ಇಲಾಖೆಯ ಆಡಿಟರ್ ರಘುನಂದನ್ ಕಾರವಾರ ಲೋಕಾಯುಕ್ತ ಅಧಿಕಾರಿಗಳು ಬೀಸಿದ ಬಲೆಗೆ ಉಡುಪಿ ಜಿಲ್ಲೆಯ ಬೈಂದೂರು ಕಾಲೇಜಿನಲ್ಲಿ 2.60 ಲಕ್ಷ ಹಣ ದೊಂದಿಗೆ ಸಿಕ್ಕಿಬಿದ್ದಿದ್ದರು.
ಅಂಕೋಲಾ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲೆ ವಿಜಯಾ ಪಾಟೀಲ್ , ಅಂಕೋಲಾ ಪದವಿ ಕಾಲೇಜಿಗೆ , ಉನ್ನತ ಶಿಕ್ಷಣ ಇಲಾಖೆಯ ಆಡಿಟ್ ಮಾಡಲು ಬಂದ ರಘುನಂದನ್ ಎನ್ನುವ ಅಧಿಕಾರಿ 1 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದಾಗಿ ಲೋಕಾಯುಕ್ತರಿಗೆ ದೂರು ನೀಡಿದ್ದರು. 1 ಲಕ್ಷ ಡಿಮ್ಯಾಂಡ್ ಮಾಡಿದ್ದ ಅಧಿಕಾರಿ ರಘುನಂದನ್, ಹಣವನ್ನ ಮೊದಲು ಭಟ್ಕಳಕ್ಕೆ ತರಲು ಹೇಳಿ, ನಂತರ ಬೈಂದೂರು ಪದವಿ ಕಾಲೇಜು ಬಳಿ ಬಂದು ಹಣ ಕೊಡಲು ತಿಳಿಸಿದ್ದರು ಎನ್ನಲಾಗಿದೆ.
ಕಾರವಾರ ಲೋಕಾಯುಕ್ತ ಕಾರವಾರ ಡಿವೈಎಸ್ಪಿ ಧನ್ಯಾ ನಾಯ್ಕ, ಇನ್ಸಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದ ತಂಡ ಬೈಂದೂರಿಗೆ ತೆರಳಿ ಬುಧವಾರ ಕಾರ್ಯಾಚರಣೆ ಮಾಡಿತ್ತು. ಪ್ರಾಂಶುಪಾಲೆ ವಿಜಯಾ ಪಾಟೀಲ್ 80 ಸಾವಿರ ಹಣವನ್ನ ರಘುನಂದನಗೆ ಕೊಡುವಾಗ ಲೋಕಾಯುಕ್ತರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಲೋಕಾಯುಕ್ತರನ್ನ ಕಂಡು ಅಡಿಟ್ ಅಧಿಕಾರಿ ಜೊತೆ ಬಂದಿದ್ದ ಶ್ರೀಧರ್ ಎಂಬುವವರನ್ನು ವಿಚಾರಣೆ ಮಾಡಲಾಗಿತ್ತು. ಆದರೆ ಆತನ ಪಾತ್ರ ಈ ಘಟನೆಯಲ್ಲಿ ಇಲ್ಲ ಎನ್ನಲಾಗಿದೆ.
ಆಡಿಟ್ ಅಧಿಕಾರಿ ರಘುನಂದನ್ ಬ್ಯಾಗಿನಲ್ಲಿ ಸುಮಾರು 2.60 ಲಕ್ಷ ಹಣ ಸಿಕ್ಕಿದ್ದು, ಅವರು ಅಂಕೋಲಾ , ಮಂಕಿ, ಭಟ್ಕಳ ಪದವಿ ಕಾಲೇಜಿನ ಆಡಿಟ್ ಮುಗಿಸಿ, ಬೈಂದೂರು ಪದವಿ ಕಾಲೇಜಿಗೆ ತೆರಳಿದ್ದು, ಎಲ್ಲಾ ಕಡೆ ಪದವಿ ಕಾಲೇಜು ಪ್ರಾಂಶುಪಾಲರಿಂದ ಹಣ ಡಿಮ್ಯಾಂಡ್ ಮಾಡಿ ಪಡೆದಿದ್ದ ಎನ್ನಲಾಗಿದೆ. ಆರೋಪಿ ರಘುನಂದನ್ ನನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
