Karwar| ಸಾರ್ವಜನಿಕರ ದೀರ್ಘಕಾಲದ ಒತ್ತಾಯದ ಮೇರೆಗೆ ಕಾರವಾರದಿಂದ ಬೆಂಗಳೂರಿಗೆ ಇಂದು ಬುಧವಾರದಿಂದ ಹೊಸ ಪಲ್ಲಕ್ಕಿ ಬಸ್ ಸೇವೆ ಆರಂಭಿಸಲಾಗಿದೆ. ಆದರೆ ಪ್ರಯಾಣಿಕರ ಬುಕ್ಕಿಂಗ್ ಸಂಖ್ಯೆ ಕಂಡು ಸಾರಿಗೆ ಅಧಿಕಾರಿಗಳೇ ಹೌಹಾರುವಂತಾಗಿದೆ.
ಕಾರವಾರದಿಂದ ಬೆಂಗಳೂರಿಗೆ ಈ ಹಿಂದೆ ಇದ್ದ ನಾನ್ ಎಸಿ ಸ್ಲೀಪರ್, ರಾಜಹಂಸ ಹಾಗೂ ಐರಾವತ್ ಬಸ್ ವ್ಯವಸ್ಥೆಯನ್ನು ಸುಮಾರು ಒಂದು ವರ್ಷಗಳಿಂದ ಶಿರಸಿ ಮಾರ್ಗ ಬಂದಾದ ಹಿನ್ನೆಲೆ ಹಾಗೂ ಪ್ರಯಾಣಿಕರ ಕೊರತೆಯಿಂದ ಬಂದ್ ಮಾಡಲಾಗಿತ್ತು. ಈ ಬಸ್ ಸಂಚಾರ ಪುನಃ ಆರಂಭಿಸುವಂತೆ ಹಲವು ಸಂಘಟನೆಗಳು ಸೇರಿದಂತೆ ಸಾರ್ವಜನಿಕರು ಸಾಕಷ್ಟು ಒತ್ತಾಯ ಮಾಡುತ್ತಾ ಬಂದಿದ್ದರು.

ಅಂತೂ ಇಂತು ಸರ್ಕಾರ ಬೇಡಿಕೆಗೆ ಮಣಿದು ಕಾರವಾರ ಡಿಪೋಗೆ ಎರಡು ನಾನ್ ಸ್ಲೀಪರ್ ಪಲ್ಲಕ್ಕಿ ಬಸ್ ಸಹ ಮಂಜೂರು ಮಾಡಿತ್ತು. ಕಾರವಾರ-ಬೆಂಗಳೂರು ಬಸ್ ಸೇವೆಯನ್ನು ಮೊನ್ನೆ ಭರ್ಜರಿಯಾಗಿಯೇ ಉದ್ಘಾಟನೆ ಮಾಡಲಾಯಿತು. ಪ್ರಯಾಣಿಕರಿಗೆ ಈ ಬಸ್ ಸಂಚಾರ ಆರಂಭದಿಂದ ಅನುಕೂಲವಾಗಲಿದೆ ಎಂದೇ ನಿರೀಕ್ಷಿಸಲಾಗಿತ್ತು.
ಆದರೆ ಬಸ್ ಆರಂಭದ ಮೊದಲ ದಿನವೇ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ದೊರಕದೇ, ಅಧಿಕಾರಿಗಳು ಹೈರಾಣ ಆಗಿದ್ದಾರೆ. ಇಂದು ಬೆಂಗಳೂರಿಗೆ ತೆರಳುವ ಬಸ್‌ಗೆ ಕೇವಲ ಮೂರು ಸೀಟುಗಳು ಮಾತ್ರ ಬುಕ್ಕಿಂಗ್ ಆಗಿರುವುದು ಆನ್‌ಲೈನ್ ಪೋರ್ಟಲ್‌ನಲ್ಲಿ ಕಾಣುತ್ತಿದೆ. ಇದು ಸಾರಿಗೆ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.
ಇನ್ನು ಪ್ರಯಾಣಿಕರು ಕಡಿಮೆ ಪ್ರಮಾಣದಲ್ಲಿ ಬುಕ್ಕಿಂಗ್ ಮಾಡಿರುವುದಕ್ಕೆ ಟಿಕೆಟ್ ದರವೇ ಒಂದು ಪ್ರಮುಖ ಕಾರಣ ಎಂದೇ ಹೇಳಲಾಗುತ್ತಿದೆ. ಸಾರಿಗೆ ಸಂಸ್ಥೆಯ ನಾನ್ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್‌ಗೆ ಬೆಂಗಳೂರಿಗೆ ಸುಮಾರು ₹1136 ಟಿಕೆಟ್ ದರ ನಿಗದಿಪಡಿಸಲಾಗಿದ್ದು, ಅದೇ ಮಾರ್ಗದಲ್ಲಿ ಓಡಾಡುವ ಖಾಸಗಿ ಬಸ್‌ಗಳ ನಾನ್ ಎಸಿ ಸ್ಲೀಪರ್ ₹849 ಹಾಗೂ ಎಸಿ ಸ್ಲೀಪರ್ ಗೆ ₹1049 ಪ್ರಯಾಣ ದರ ಇದೆ.
ಖಾಸಗಿ ಹಾಗೂ ಸಾರಿಗೆ ಸಂಸ್ಥೆಯ ಬಸ್ ನಡುವೆ ಸಾಕಷ್ಟು ದರ ವ್ಯತ್ಯಾಸದಿಂದ ಪ್ರಯಾಣಿಕರು ಸಾರಿಗೆ ಬಸ್ ಬಳಕೆಗೆ ಹಿಂಜರಿಯುತ್ತಿದ್ದಾರೆ. ಹೆಚ್ಚಿನ ದರದ ಕಾರಣಕ್ಕೆ ಪ್ರಯಾಣಿಕರು ಖಾಸಗಿ ಬಸ್‌ಗಳತ್ತ ಮುಖ ಮಾಡುವುದು ಅನಿವಾರ್ಯ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಬಸ್ ಸೇವೆಯನ್ನು ಒಮ್ಮೆಲೆ ಆರಂಭಿಸಿದಾಗ, ಕೆಲ ದಿನ ಆ ರೂಟ್ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ದೊರಕಲು ಸಮಯ ಹಿಡಿಯುತ್ತದೆ. ನಂತರ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಾರಿಗೆ ಬಸ್ ನಲ್ಲಿಯೇ ಪ್ರಯಾಣಿಸುತ್ತಾರೆ. ಇನ್ನು ಸಾರಿಗೆ ಸಂಸ್ಥೆ ಬಸ್ ಗಳ ಸೇವೆಯ ಬಗ್ಗೆ ಸಾರ್ವಜನಿಕರ ನಂಬಿಕೆ, ವಿಶ್ವಾಸ ಇದೆ ಎಂಬುದು ಸಾರಿಗೆ ಅಧಿಕಾರಿಗಳ ಹೇಳಿಕೆ.
ಒಟ್ಟಾರೆ ಸಾರ್ವಜನಿಕರ ಒತ್ತಾಯದ ಮೇರೆಗೆ ಆರಂಭಿಸಿದ ಈ ಪಲ್ಲಕ್ಕಿ ಬಸ್ ಸೇವೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಪಂದನೆ ದೊರಕುತ್ತದೆಯೇ ಎಂಬುದು ಕಾದು ನೋಡಬೇಕಾಗಿದೆ.
