ಕಾರವಾರ/ಮಂಗಳೂರು: ದೇಶದ ಆರ್ಥಿಕತೆಯಲ್ಲಿ ಬಂದರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ರಫ್ತು–ಆಮದುಗಳ ಮೂಲಕ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಬಂದರುಗಳ ಸುರಕ್ಷತೆ ಅತ್ಯಂತ ಪ್ರಮುಖ ವಿಷಯವಾಗಿರುವ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಸಮುದ್ರ ಬಂದರುಗಳಿಗೆ (Sea Port) ಇನ್ನು ಮುಂದೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF- Central Industrial Security Force) ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡಿದೆ.
ಈ ಬಗ್ಗೆ ಮೊನ್ನೆ ಒಡಿಸ್ಸಾದಲ್ಲಿ ನಡೆದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 57 ನೇ ಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶದ ಪ್ರಮುಖ ಬಂದರುಗಳ (Sea Port) ಗಳ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶವಿದೆ. ಹೀಗಾಗಿ ಬಂದರುಗಳಿಗೆ ಸಿಐಎಸ್‌ಎಫ್ ಭದ್ರತೆ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ ಸಿಐಎಸ್ಎಫ್ ಬಂದರುಗಳ ಭದ್ರತೆಯನ್ನು ವಹಿಸಿಕೊಂಡ ನಂತರ, ದೇಶದ ಆರ್ಥಿಕ ಬೆಳವಣಿಗೆಯೊಂದಿಗೆ ನಮ್ಮ ಕಡಲ ಸುರಕ್ಷತೆಯೂ ಸಹ ಸುಧಾರಿಸಲಿದೆ ಎಂದು ಹೇಳಿದ್ದರು.

ಎಲ್ಲಾ ರಫ್ತು-ಆಮದು ಬಂದರುಗಳಲ್ಲಿ ಭಯೋತ್ಪಾದನಾ ನಿಗ್ರಹ ಮತ್ತು ವಿಧ್ವಂಸಕ-ವಿರೋಧಿ ಕಾರ್ಯಾಚರಣೆಗಳಂತಹ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು ವೃತ್ತಿಪರ ಅರೆಸೈನಿಕ ಸಂಸ್ಥೆಯ ಅಗತ್ಯವನ್ನು ಕೇಂದ್ರ ಸರ್ಕಾರ ಗುರುತಿಸಿ, ಈ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರದ ಭಾಗವಾಗಿ ಕರ್ನಾಟಕದ ಪ್ರಮುಖ ಬಂದರುಗಳಾದ ಕಾರವಾರ ಬಂದರು (Karwar Port) ಹಾಗೂ ನ್ಯೂ ಮಂಗಳೂರು ಬಂದರು (New Mangalore Port) ಗಳಿಗೆ ಸಿಐಎಸ್ಎಫ್ ಭದ್ರತೆ ಒದಗಿಸುವ ಯೋಜನೆ ಇದೆ ಎಂದು ತಿಳಿದುಬಂದಿದೆ.
ಈಗಾಗಲೇ ಕರ್ನಾಟಕದಲ್ಲಿ ಕೈಗಾ ಅಣುಶಕ್ತಿ (NPCIL- Nuclear Power Corporation) ಸೇರಿದಂತೆ ದೇಶದ ಹಲವು ಪ್ರಮುಖ ತಂತ್ರಜ್ಞಾನ ಹಾಗೂ ಕೈಗಾರಿಕಾ ಕೇಂದ್ರಗಳಿಗೆ CISF ಭದ್ರತೆ ನೀಡುತ್ತಿದೆ. ಹೊಸ ನಿರ್ಧಾರದಿಂದ ಬಂದರುಗಳ ಭದ್ರತೆ ಇನ್ನಷ್ಟು ಬಲವಾಗಲಿದೆ.
ಪ್ರಸ್ತುತ CISF ದೇಶದ 71 ವಿಮಾನ ನಿಲ್ದಾಣಗಳು, ಸಂಸತ್ತಿನ ಸಂಕೀರ್ಣ ಸೇರಿದಂತೆ 361 ಪ್ರಮುಖ ಕೇಂದ್ರಗಳಿಗೆ ಭದ್ರತೆ ಒದಗಿಸುತ್ತಿದ್ದು, ಗುಜರಾತ್‌ನ ಕೆವಾಡಿಯಾ ಬಳಿಯ Statue of Unity ಕೂಡ ಇದರ ವ್ಯಾಪ್ತಿಯಲ್ಲಿ ಇದೆ.
ದೇಶದ ಆರ್ಥಿಕ ಮೂಲ ಸೌಕರ್ಯಗಳನ್ನು ಹಾಗೂ ಸಮುದ್ರ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಕರಾವಳಿ ಭಾಗದ ಬಂದರುಗಳ ಸುರಕ್ಷತೆಗೆ ಇದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.
