Banavasi| ಹಲವು ವರ್ಷಗಳಿಂದ ಮಳೆ ನೀರು ಸೋರುತ್ತಿರುವ ಇತಿಹಾಸ ಪ್ರಸಿದ್ಧ ಶ್ರೀ ಮಧುಕೇಶ್ವರ ದೇವಸ್ಥಾನದ ದುರಸ್ತಿ ಕಾರ್ಯಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ನಾಳೆಯಿಂದಲೇ ಪ್ರಾಥಮಿಕ ಕಾಮಗಾರಿ ಆರಂಭವಾಗಲಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಹಿರಿಯ ಅಧಿಕಾರಿ ಹಾಗೂ ಅಧೀಕ್ಷಕ ಇಂಜಿನಿಯರ್ ರಮೇಶ್ ಮೂಲಿಮನಿ ತಿಳಿಸಿದ್ದಾರೆ.

ಬನವಾಸಿ ನೂತನ ತಾಲೂಕು ರಚನಾ ಹೋರಾಟ ಸಮಿತಿಯೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಪುರಾತನ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ಸೋರಿಕೆಯನ್ನು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ದೇವಸ್ಥಾನದ ಮೇಲೆ ಟಾರ್ಪಲ್ ಹೊದಿಕೆ ಅಳವಡಿಸುವ ಬದಲು, ಪುರಾತನ ಕಲ್ಲುಗಳಿಗೆ ಸೂಕ್ತವಾದ ಪಾರದರ್ಶಕ ವಾಟರ್‌ಪ್ರೂಫ್ ಲೇಪನ ಬಳಸಿ ಸೋರಿಕೆ ತಡೆಗಟ್ಟಲು ಸಾಧ್ಯವಿದೆ ಎಂದು ತಿಳಿಸಿದರು.
ದುರಸ್ತಿ ಕಾರ್ಯವನ್ನು ತಕ್ಷಣ ಆರಂಭಿಸುವಂತೆ ಕನ್ಸರ್ವೇಷನ್ ಅಸಿಸ್ಟೆಂಟ್ ರಾಕೇಶ್ ಅವರಿಗೆ ಸೂಚನೆ ನೀಡಿರುವುದಾಗಿ ಅವರು ಹೇಳಿದರು. ಇದೇ ವೇಳೆ, ದೇವಸ್ಥಾನದ ಶಾಶ್ವತ ಸಂರಕ್ಷಣಾ ಕಾಮಗಾರಿಯನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಟೆಕ್ನಿಕಲ್ ಡೆಪ್ಯೂಟಿ ಇಂಜಿನಿಯರ್ ಕೆಂಪೇಗೌಡ, ದೇವಸ್ಥಾನದ ಮೇಲೆ ಅಲ್ಯೂಮಿನಿಯಂ ತಗಡು ಅಳವಡಿಸುವುದು ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿದ್ದು, ಪುರಾತತ್ವ ಇಲಾಖೆಯ ಮುಖ್ಯ ಉದ್ದೇಶ ಪುರಾತನ ಸಾಂಸ್ಕೃತಿಕ ಪರಂಪರೆ ಹಾಗೂ ಮೂಲ ಸ್ವರೂಪವನ್ನು ಸಂರಕ್ಷಿಸುವುದಾಗಿದೆ ಎಂದು ಸ್ಪಷ್ಟಪಡಿಸಿದರು. ದೇವಸ್ಥಾನಕ್ಕೆ ಯಾವುದೇ ಹಾನಿಯಾಗದಂತೆ ಶಾಶ್ವತ ಕಾಮಗಾರಿ ಕೈಗೊಳ್ಳಲು ಇಲಾಖೆ ಬದ್ಧವಾಗಿದೆ ಎಂದರು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ್ ಹೇಮಾದ್ರಿ ಮಾತನಾಡಿ, ದೇವಸ್ಥಾನ ಆವರಣದಲ್ಲಿರುವ ಯಜ್ಞ-ಯಾಗಗಳ ಕಟ್ಟಡಕ್ಕೂ ದುರಸ್ತಿ ಅಗತ್ಯವಿದ್ದು, ಇಲಾಖೆಯು ಅದರತ್ತವೂ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ ಮಾತನಾಡಿ, ಇಲಾಖೆಯ ಅಧಿಕಾರಿಗಳ ಭರವಸೆಯ ಮೇಲೆ ವಿಶ್ವಾಸವಿದ್ದು, ಕಾಮಗಾರಿ ಮಾತಿನಂತೆ ನಡೆಯದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸದ್ಯಕ್ಕೆ ಘೋಷಿಸಿದ್ದ ಅರೆಬೆತ್ತಲೆ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದರು.

ಸಭೆಯಲ್ಲಿ ವಿ.ಎಸ್.ಎಸ್. ಅಧ್ಯಕ್ಷ ಗಜಾನನ ಗೌಡ, ವೀರಶೈವ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಡಿ. ಮಹೇಶಕುಮಾರ, ಪ್ರಾಂಶುಪಾಲ ಮಧುಸೂದನ್ ಭಟ್, ಹೋರಾಟ ಸಮಿತಿ ಕಾರ್ಯದರ್ಶಿ ವಿಶ್ವನಾಥ್ ವಡೆಯರ್, ಲಯನ್ಸ್ ಪ್ರಮುಖ ಸಾಯಿರಾಮ ಕಾನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಭೆಯ ಬಳಿಕ ಅಧಿಕಾರಿಗಳು, ಹೋರಾಟ ಸಮಿತಿ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ, ಕಾಮಗಾರಿ ಆರಂಭವಾಗುವ ಸ್ಥಳಗಳ ಕುರಿತು ಮಾಹಿತಿ ನೀಡಿದರು.

“ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳ ಮೇಲೆ ವಿಶ್ವಾಸವಿದೆ. ಒಂದು ವೇಳೆ ಮಾತಿನಂತೆ ನಡೆದುಕೊಳ್ಳದಿದ್ದರೆ ಮತ್ತೆ ಪ್ರತಿಭಟನೆಯ ಬಿಸಿ ತಟ್ಟಲಿದೆ. ಸದ್ಯಕ್ಕೆ ಅರೆಬೆತ್ತಲೆ ಪ್ರತಿಭಟನೆಯನ್ನು ಮುಂದೂಡಿದ್ದೇವೆ.”
— ಉದಯಕುಮಾರ ಕಾನಳ್ಳಿ, ಅಧ್ಯಕ್ಷರು, ಬನವಾಸಿ ನೂತನ ತಾಲೂಕು ರಚನಾ ಹೋರಾಟ ಸಮಿತಿ.