ಕಾರವಾರ–ಯಶವಂತಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಗರ್ಭಿಣಿ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ (Karwar–Yesvantpur Express) ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಸೂಕ್ತ ವೈದ್ಯಕೀಯ ನೆರವು ಸಿಗದ ಕಾರಣ ಸಹಪ್ರಯಾಣಿಕ ಮಹಿಳೆಯರೇ ದಾದಿಯರಾಗಿ ಬದಲಾಗಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

ರೈಲು ಪ್ರಯಾಣ ಮಾಡುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ತಕ್ಷಣ ತುರ್ತು ವೈದ್ಯಕೀಯ ಸೌಲಭ್ಯ ಸಿಗದ ಹಿನ್ನೆಲೆಯಲ್ಲಿ ರೈಲಿನಲ್ಲಿದ್ದ ಇತರ ಮಹಿಳೆಯರು ಬೋಗಿಗೆ ಬೆಡ್‌ಶೀಟ್ ಪರದೆ ಕಟ್ಟಿ ತಾತ್ಕಾಲಿಕ ಪ್ರಸೂತಿ ಗೃಹವಾಗಿ ಮಾರ್ಪಡಿಸಿದರು. ರೈಲು ಬಂಟ್ವಾಳ ತಲುಪುವ ಹೊತ್ತಿಗೆ ಗರ್ಭಿಣಿ ಗಂಡು ಮಗುವಿಗೆ ಜನ್ಮ ನೀಡಿದರು.

ಅನುಭವಸ್ಥ ಮಹಿಳೆಯರ ಮಾರ್ಗದರ್ಶನದಲ್ಲಿ ಜತೆ ಸೇರಿದ ಮಹಿಳೆಯರು ಹರಸಾಹಸ ಪಟ್ಟು ಗರ್ಭಿಣಿಗೆ ಸಹಜ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಮೊದಲ ಅಳು ಕೇಳುತ್ತಿದ್ದಂತೆ ರೈಲಿನಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ನಂತರ ತಾಯಿ ಮತ್ತು ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.