Yellapur| ನಿನ್ನೆ ಬುಧವಾರ ಬೆಳಗ್ಗೆ ಯಲ್ಲಾಪುರದ ತಾಳೆಕುಂಬ್ರಿಯ ಎನ್.ಹೆಚ್‌ 63 ಬಳಿ ಚಾಲಕ ಸಮೇತ ಸುಟ್ಟು ಕರಕಲಾಗಿದ್ದ ಕಾರಿನ ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ.

ಬೆಳಗಾವಿಯ ಕನಬರಗಿ ರಸ್ತೆಯ ಚಂದ್ರಮೌಳಿ ಕಾಲೋನಿಯ ನಿತೇಶ ಜಗನ್ನಾಥ ದಾಪಳೆ (35) ಎಂಬಾತನೆ ಕಾರಿನ ಜೊತೆ ಸುಟ್ಟು ಕರಕಲಾದ ವ್ಯಕ್ತಿ ಎಂದು ಭಾವಿಸಲಾಗಿದೆ. ಮೃತನ ತಂದೆ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಾರು ನಂಬರ್ KA-04 MJ-8986 ತನ್ನ ಮಗನದ್ದು ಎಂದು ಗುರುತಿಸಿದ್ದಾರೆ. ಅಪಘಾತದ ರಭಸಕ್ಕೆ ಕಾರಿಗೆ ಬೆಂಕಿ ತಾಗಿ ಕಾರು ಹಾಗೂ ಕಾರ್ ನಲ್ಲಿದ್ದ ತನ್ನ ಮಗ ನಿತೇಶನೋ ಅಥವಾ ಬೇರೆ ಯಾರೋ ವ್ಯಕ್ತಿ ಪೂರ್ಣ ಸುಟ್ಟು ಹೋಗಿದ್ದು, ಎಲುಬುಗಳು ಮಾತ್ರ ಉಳಿದಿದ್ದು, ಬೇರೆ ಯಾವುದೇ ಕುರುಹು ಕಂಡು ಬರುತ್ತಿಲ್ಲ ಎಂದು ದೂರಿನಲ್ಲಿ‌ ಉಲ್ಲೇಖಿಸಿದ್ದರು.

ಹೊನ್ನಾವರದ ಸೂಳೆಮುರ್ಕಿ ಬಳಿ‌ ಸಹ ಕಾರಿಗೆ ಬೆಂಕಿ‌ ತಗುಲಿ‌ ಅದರ ಚಾಲಕ ಸಾವನ್ನಪ್ಪಿದ್ದ. ಮೊದಲು ಈ ಘಟನೆ ಅಪಘಾತವೆಂದೇ ಭಾವಿಸಲಾಗಿತ್ತು. ಆದರೆ ಎಲ್ಲಾ ಆಯಾಮಗಳಲ್ಲಿ ಪೋಲಿಸರು ತನಿಖೆ ನಡೆಸಿದಾಗ ಕೊಲೆ ಕೃತ್ಯ‌ ಬಯಲಿಗೆ ಬಂದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಎಸ್.ಪಿ ದೀಪನ್ ಎಂ.ಎನ್ ಈ ಸಂದರ್ಭದಲ್ಲಿ ಪ್ರಕರಣದ ತನಿಖಾಧಿಕಾರಿಗಳಿಗೆ ಹಲವು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ಚುರುಕುಗೊಳಿಸುವಂತೆ ನಿರ್ದೇಶಿಸಿದ್ದಾರೆ.