Bhatkal : ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಅಕ್ರಮವಾಗಿ ಒಂಟೆಗಳ ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ, 8 ಒಂಟೆಗಳನ್ನು ವಶಕ್ಕೆ ಪಡೆದಿದ್ದಾರೆ.
ಭಟ್ಕಳ ಪೊಲೀಸರ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರ ನೋಂದಣಿಯ MH-09/HD-5448 ಸಂಖ್ಯೆಯ ಲಾರಿಯಲ್ಲಿ ಒಂಟೆಗಳನ್ನು ಸಾಗಿಸಲಾಗುತ್ತಿದ್ದುದು ಪತ್ತೆಯಾಗಿದೆ. ಈ ಲಾರಿ ಭಟ್ಕಳದ ಶಿರಾಲಿಯಿಂದ ಉಳ್ಳಾಲದತ್ತ ತೆರಳುತ್ತಿತ್ತು ಎಂದು ತಿಳಿದುಬಂದಿದೆ.

ಮೂಕ ಪ್ರಾಣಿಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಮಧ್ಯಪ್ರದೇಶ ಮೂಲದ ಕರಣ ಬಾಬರ್, ಮಹಾರಾಷ್ಟ್ರದ ಸುಹಾಸ್ ಸೂರ್ಯವಂಶಿ ಹಾಗೂ ಯಶ್ ಗೊಟಕಿಂಡೆ ಎಂದು ಗುರುತಿಸಲಾಗಿದೆ.
ಈ ಸಂಬಂಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
