ಉಡುಪಿ: ಮೂಡನಿಡಂಬೂರು ಗ್ರಾಮದ ಆದಿಉಡುಪಿ ಕೃಷಿ ಉತ್ಪನ ಮಾರುಕಟ್ಟೆಯ ಹಿಂಭಾಗದ, ಖಾಸಗಿಯವರ ಸ್ಥಳದಲ್ಲಿದ್ದ ಪಾಳುಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವ ಘಟನೆ ಮಂಗಳವಾರ ನಡೆದಿದೆ.
ಕಳೇಬರ ಗುರುತಿಸಲಾಗದಷ್ಟು ಕೊಳೆತು ಹೋಗಿದ್ದು, ವ್ಯಕ್ತಿ ಹದಿನೈದು ದಿನಗಳ ಹಿಂದೆಯೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಪ್ರಗತಿಯಲ್ಲಿದೆ. ಮೃತನ ವಾರಸುದಾರರು ಉಡುಪಿ ನಗರ ಪೋಲಿಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಅಗ್ನಿಶಾಮಕ ದಳ ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಬಾವಿಯಿಂದ ಕಳೇಬರವನ್ನು ಮೇಲಕೆತ್ತಲಾಯಿತು. ಮಣಿಪಾಲ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ಮರಣೋತ್ತರ ಪ್ರಕ್ರಿಯೆ ನಡೆಸಲಾಗಿದೆ. ನಗರ ಪೋಲಿಸ್ ಠಾಣೆಯ ಎಸ್ ಐ ಹರೀಶ್, ಆರಕ್ಷಕಿ ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು. ವಿಧಿ ವಿಜ್ಞಾನ ತಜ್ಞರು ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿದರು.
