ಕಾರವಾರ: ಗೋವಾ ರಾಜ್ಯದಿಂದ ಅಕ್ರಮವಾಗಿ ತರಲಾಗಿದ್ದ ಮದ್ಯವನ್ನು ಪರ್ಮಿಟ್ ಇಲ್ಲದೆ ಸಂಗ್ರಹಿಸಿ ಮಾರಾಟಕ್ಕೆ ಇಟ್ಟಿದ್ದ ವ್ಯಕ್ತಿಯೊಬ್ಬನನ್ನು ಕಾರವಾರ ನಗರ ಪೊಲೀಸರು ಬಂಧಿಸಿ, ಸಾವಿರಾರು ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಕೋಡಿಭಾಗದ ನದಿವಾಡಾದ ಸುಭಾಷ್ ತಂದೆ ಬಾಬು ತಾಮ್ಲ (48) ಎಂಬಾತನನ್ನು ಬಂಧಿಸಲಾಗಿದೆ.

ಕಾರವಾರ ನಗರದ ಕೋಡಿಭಾಗದ ನಡಿವಾಡದ ಶೆಡ್‌ವೊಂದರಲ್ಲಿ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಅಕ್ರಮವಾಗಿ ಮದ್ಯ ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಉಪನಿರೀಕ್ಷಕ ಉದ್ದಪ್ಪ ಧರೆಪ್ಪನವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ದಾಳಿಯ ವೇಳೆ 28 ಬಾಟಲಿ “Goa’s Special Palm Fenny” (750 ಮಿ.ಲೀ.) ಹಾಗೂ 21 ಬಾಟಲಿ “Light Horse Premium Blended Malt Whisky” (750 ಮಿ.ಲೀ.) ಸೇರಿದಂತೆ ಒಟ್ಟು 49 ಬಾಟಲಿಗಳ ಗೋವಾ ರಾಜ್ಯ ತಯಾರಿಕೆಯ ಮದ್ಯ ಪತ್ತೆಯಾಗಿದ್ದು, ಸುಮಾರು ₹6,860 ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 32 ಹಾಗೂ 34ರಡಿ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.