Hawksbill turtle carcass found |Ravindranath Tagore Beach|Karwar| ಪಶ್ಚಿಮ ಕಡಲತೀರದಲ್ಲಿ ಅತ್ಯಂತ ಅಪರೂಪವಾಗಿರುವ ‘ಹಾಕ್ಸ್ ಬಿಲ್’ (Hawksbill Turtles) ‌ಜಾತಿಯ ಆಮೆಯೊಂದರ ಮೃತದೇಹವು ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಪತ್ತೆಯಾಗಿದೆ.‌

ಕೋಸ್ಟಲ್ ಮರೈನ್ ಇಕೋ ಸಿಸ್ಟಮ್ ಸೆಲ್ ಕಾರವಾರ ವಲಯದ ವಲಯ ಅರಣ್ಯಾಧಿಕಾರಿಗಳು ಹಾಗೂ ಅಮೆ ತಜ್ಞರು ಕಡಲತೀರಕ್ಕೆ ಭೇಟಿ ನೀಡಿ ಮೃತ ಆಮೆಯ ವೈದ್ಯಕೀಯ ಪರೀಕ್ಷೆ ನಡೆಸಿದರು.

ಹಾಕ್ಸಬಿಲ್ ಆಮೆ ವಯಸ್ಸು 35 ರಿಂದ 40 ವರ್ಷ ಎಂದು ಕುಂದಾಪುರದಿಂದ ಆಗಮಿಸಿದ ಕಡಲಾಮೆ ತಜ್ಞ ವೈದ್ಯರು ಹೇಳಿದ್ದಾರೆ. ನಂತರ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಹಾಕ್ಸಬಿಲ್ ಆಮೆಯನ್ನು ಮರಳಲ್ಲಿ ಹೂಳಲಾಯಿತು. ಆಮೆಯ ಕರಳುಗಳಲ್ಲಿ ಪ್ಲಾಸ್ಟಿಕ್ ಕಂಡುಬಂದಿದ್ದು, ಪ್ಲಾಸ್ಟಿಕ್ಸೇ ಸೇವನೆಯಿಂದ ಸಾವು ಪಟ್ಟಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಆಲೀವ್ ರಿಡ್ಲೆ ಜಾತಿಯ ಆಮೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಾಕ್ಸಬಿಲ್ ಪ್ರಬೇಧ ಆಮೆ ಅರಬ್ಬೀ ಸಮುದ್ರದಲ್ಲಿ ಕಾಣುವುದು ವಿರಳ. ಕಳೆದ‌ ಸುಮಾರು ಎರಡು ವರ್ಷಗಳ‌ಹಿಂದೆ ಮಾಜಾಳಿಯ ಕಡಲ ತೀರದಲ್ಲಿ ಇದೇ ಪ್ರಭೇದಕ್ಕೆ ಸೇರಿದ್ದ ಆಮೆಯ ಮೃತದೇಹ‌ ದೊರೆತಿತ್ತು.

ಅಳಿವಿನಂಚಿನಲ್ಲಿರುವ ಪ್ರಭೇದ: ಹಾಕ್ಸ್ ಬಿಲ್ ಸಮುದ್ರ ಆಮೆಗಳಲ್ಲೇ ಅತ್ಯಂತ ಚಿಕ್ಕದಾದ ಮತ್ತು ವಿಶಿಷ್ಟವಾದ, ಅಳಿವಿನಂಚಿನಲ್ಲಿರುವ (Critically Endangered) ಪ್ರಭೇದವಾಗಿದೆ. ಗಿಡುಗದ ಕೊಕ್ಕಿನಂತಿರುವ ತಲೆ, ಹವಳದ ದಿಬ್ಬಗಳ (Coral reefs) ಆಶ್ರಯ, ಮತ್ತು ಆಕರ್ಷಕ ಚಿಪ್ಪಿಗಾಗಿ ಇವು ಹೆಸರುವಾಸಿ. ಉಷ್ಣವಲಯದ ಸಮುದ್ರಗಳಲ್ಲಿ ಕಂಡುಬರುವ ಇವು, ಹವಳದ ದಿಬ್ಬಗಳ ಪರಿಸರ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಲು ಪ್ರಮುಖ ಪಾತ್ರವಹಿಸುತ್ತವೆ. 

ಇವುಗಳ ತಲೆಯು ಕಿರಿದಾಗಿದ್ದು, ಗಿಡುಗದಂತೆ ಮೊನಚಾದ ಕೊಕ್ಕನ್ನು ಹೊಂದಿರುತ್ತವೆ. ಚಿಪ್ಪುಗಳು (Shell) ಹಳದಿ, ಕಂದು, ಕಪ್ಪು ಮತ್ತು ಕಿತ್ತಳೆ ಬಣ್ಣಗಳ ಮಿಶ್ರಣದಿಂದ, ಸುಂದರವಾದ ವಿನ್ಯಾಸವನ್ನು ಹೊಂದಿರುತ್ತವೆ.

ವಯಸ್ಕ ಆಮೆಗಳು ಸುಮಾರು 2.5 ರಿಂದ 3 ಅಡಿ ಉದ್ದವಿದ್ದು, 40-60 ಕೆಜಿ ತೂಕವಿರುತ್ತವೆ. ಇವು ಮುಖ್ಯವಾಗಿ ಹವಳದ ದಿಬ್ಬಗಳಲ್ಲಿ ಕಂಡುಬರುವ ಸ್ಪಂಜುಗಳನ್ನು (Sponges) ತಿನ್ನುತ್ತವೆ. ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳ ಉಷ್ಣವಲಯದ ಸಮುದ್ರಗಳಲ್ಲಿ, ಹೆಚ್ಚಾಗಿ ಹವಳದ ದಿಬ್ಬಗಳಿರುವ ಕಡಿಮೆ ಆಳದ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಸುಂದರವಾದ ಚಿಪ್ಪಿಗಾಗಿ (Tortoiseshell) ಅಕ್ರಮ ಬೇಟೆ, ಪ್ಲಾಸ್ಟಿಕ್ ಮಾಲಿನ್ಯ ಮತ್ತು ಗೂಡುಕಟ್ಟುವ ತಾಣಗಳ ನಾಶದಿಂದಾಗಿ ಇವು ಅಳಿವಿನಂಚಿನಲ್ಲಿವೆ. ಇವುಗಳನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ (Schedule I) ರಕ್ಷಿಸಲಾಗಿದೆ. 

ಕರ್ನಾಟಕದ ಕರಾವಳಿಯಲ್ಲೂ ಅಪರೂಪಕ್ಕೆ ಇವು ಪತ್ತೆಯಾಗಿವೆ, ಇವುಗಳನ್ನು ಸ್ಥಳೀಯವಾಗಿ ‘ಗಿಡುಗ ಆಮೆ’ ಎಂದೂ ಸಹ ಕರೆಯುತ್ತಾರೆ.