Bhatkal|ನಕಲಿ ಆಧಾರ್ ಕಾರ್ಡ್ ಹಾಗೂ ಪಹಣಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಆರೋಪಿತರಿಗೆ ಜಾಮೀನು ದೊರಕಿಸುವ ಮೂಲಕ ವಂಚನೆ ನಡೆಸುತ್ತಿದ್ದ ಆರೋಪಿಯನ್ನು ಭಟ್ಕಳ ಶಹರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಂಗಳೂರು ಮರೋಳಿ ನಿವಾಸಿ ಮಹೇಶ (42), ಎಂದು ಗುರುತಿಸಲಾಗಿದೆ. 2025 ಜೂನ್ 30ರಂದು ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಪ್ರಭಾರ ಮುಖ್ಯ ಆಡಳಿತಾಧಿಕಾರಿ ಚೇತನ ಎಂ. ಚಂದಾವರಕರ್ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಜಾಮೀನು ಪ್ರಮಾಣ ಪತ್ರಕ್ಕೆ ಲಗತ್ತಿಸಿದ್ದ ಆಧಾರ್ ಕಾರ್ಡ್‌ಗಳನ್ನು ಜಾಮೀನು ನಿರ್ವಹಣಾ ವ್ಯವಸ್ಥೆ ಮೂಲಕ ಪರಿಶೀಲಿಸಿದಾಗ ಅವು ನಕಲಿ ಎಂಬುದು ಪತ್ತೆಯಾಗಿದೆ. ಈ ವೇಳೆ ಆರೋಪಿ ನ್ಯಾಯಾಲಯದಿಂದ ಪರಾರಿಯಾಗಿದ್ದ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು 2026 ಏಪ್ರಿಲ್ 15ರಂದು ಮಂಗಳೂರಿನಲ್ಲಿ ಆರೋಪಿತನನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಇನ್ನಿಬ್ಬರು ಆರೋಪಿಗಳು ಭಾಗವಹಿಸಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಅವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಎಸ್‌ಪಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್‌ಪಿಗಳಾದ ಎಂ. ಕೃಷ್ಣಮೂರ್ತಿ, ಜಗದೀಶ್ ಎಂ., ಡಿವೈಎಸ್‌ಪಿ ಗಿರೀಶ್ ಬಿ. ಮಾರ್ಗದರ್ಶನದಲ್ಲಿ ಪಿಐ ದಿವಾಕರ ಪಿ.ಎಂ. ನೇತೃತ್ವದಲ್ಲಿ ಪಿಎಸ್ಐ ನವೀನ್ ಎಸ್. ನಾಯ್ಕ ಮತ್ತು ಸಿಬ್ಬಂದಿ ದಿನೇಶ ನಾಯಕ, ಮಹಾಂತೇಶ ಹಿರೇಮಠ, ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
