ಶಿರಸಿ: ಕರ್ನಾಟಕ ರಕ್ಷಣಾ ವೇದಿಕೆಯ (ಟಿ.ಎ. ನಾರಾಯಣ ಗೌಡ ಬಣ) ಉತ್ತರ ಕನ್ನಡ ಜಿಲ್ಲಾ ನೂತನ ಅಧ್ಯಕ್ಷರಾಗಿ ಅರುಣ್ ಕೃಷ್ಣ ಹರ್ಕಡೆ ಅವರು ನೇಮಕಗೊಂಡಿದ್ದಾರೆ.
ಶಿರಸಿಯ ನಿವಾಸಿಯಾದ ಅರುಣ್ ಕೃಷ್ಣ ಹರ್ಕಡೆ ಅವರು ಈ ಹಿಂದೆ ಕರವೇ ಜಿಲ್ಲಾ ಉಪಾಧ್ಯಕ್ಷರಾಗಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಸಂಘಟನಾ ಶಕ್ತಿ ಮತ್ತು ಕನ್ನಡ ನಾಡು-ನುಡಿಯ ಪರವಾಗಿ ಅವರು ಮಾಡಿದ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ, ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರು ಈ ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ.
ಸಂಘಟನೆಯ ಈ ಗುರುತರ ಜವಾಬ್ದಾರಿಯನ್ನು ಅರುಣ್ ಕೃಷ್ಣ ಅವರು ಅತ್ಯಂತ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕರವೇ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಅವರು ಶ್ರಮಿಸಲಿದ್ದಾರೆ ಎಂದು ರಾಜ್ಯಾಧ್ಯಕ್ಷರು ಆಶಿಸಿದ್ದಾರೆ.
ಈ ನೇಮಕಾತಿಯ ಕುರಿತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ನಾಯ್ಕ ಅವರು ಅಧಿಕೃತ ಮಾಹಿತಿ ನೀಡಿದ್ದು, ನೂತನ ಜಿಲ್ಲಾಧ್ಯಕ್ಷರಿಗೆ ಜಿಲ್ಲೆಯ ಎಲ್ಲಾ ತಾಲೂಕಾ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
