Karwar| ರಾಜ್ಯ ಸರ್ಕಾರವು ಗ್ಯಾರಂಟಿ ಹೆಸರಲ್ಲಿ ಬಂದ, ಗ್ಯಾರಂಟಿ ಇಲ್ಲದ ಸರ್ಕಾರ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವ್ಯಂಗವಾಡಿದ್ದಾರೆ.
ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಖುರ್ಚಿ ಕಿತ್ತಾಟ ಆರಂಭವಾಗಿ, ಇವರೆಗೂ ನಿಂತಿಲ್ಲ. ಮೊದಲ ಮೂರು ವರ್ಷ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಕುರ್ಚಿ ಕಿತ್ತಾಟ ನಡೆಯಿತು. ಈಗ ಡಿ.ಕೆ.ಶಿವಕುಮಾರ್ ಸಿಎಂ ಆದ ನಂತರ ಸಚಿವ ಸ್ಥಾನಕ್ಕಾಗಿ ಹಾಗೂ ಖಾತೆಗಾಗಿ ಕಿತ್ತಾಟ ಶುರುವಾಗಿದೆ. ಇವರ ಕಿತ್ತಾಟದಲ್ಲಿ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ ಎಂದು ಟೀಕಿಸಿದರು. ಕೇವಲ ಜನರಿಗೆ ಯೋಜನೆಗಳ ಗ್ಯಾರಂಟಿಯ ಕೊಟ್ಟು ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಇಲ್ಲ ಎಂದು ಕಾಗೇರಿ ವ್ಯಂಗವಾಡಿದರು.
ಇನ್ನು ಆರ್.ಎಸ್.ಎಸ್ ನೊಂದಣಿಯ ಬಗ್ಗೆ ಗೃಹ ಸಚಿವ ಖರ್ಗೆ ಬಾಯಿ ಚಪಲಕ್ಕೆ ಮಾತನಾಡುವುದನ್ನು ಬಿಡಬೇಕು ಎಂದು ಹೇಳಿದ ಕಾಗೇರಿ, ಪ್ರಿಯಾಂಕಾ ಖರ್ಗೆಯವರು ಕಳೆದ ಮೂರು ವರ್ಷ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಮಾಡಿದ ಸಾಧನೆಯನ್ನು ಮೊದಲು ಜನರೆದುರಿಗಿಡಲಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಪ್ರನುಖರಾದ ಜಗದೀಶ ನಾಯಕ, ನಾಗರಾಜ ನಾಯಕ ಇನ್ನಿತರರು ಇದ್ದರು.
