Siddapur: ಕಡವೆಯೊಂದು (Sambar deer) ನಿಗೂಢವಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ತ್ಯಾಗಲಿಯಲ್ಲಿ‌ ನಡೆದಿದೆ.

ತ್ಯಾಗಲಿಯ ಮಾಲ್ಕಿ ಸರ್ವೆ ನಂ.160ರಲ್ಲಿ ಜೂ.11 ರ ಗುರುವಾರ ಸುಮಾರು 2 ವರ್ಷ ಪ್ರಾಯದ ಹೆಣ್ಣು ಕಡವೆ ಮೃತಪಟ್ಟಿರುವುದು ಕಂಡುಬಂದಿದ್ದು, ಮಾಹಿತಿ ಮೇರೆಗೆ ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಹೆಚ್. ಸೂರ್ಯವಂಶಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಎಸ್. ನಿಂಗಾಣಿ ಅವರ ಮಾರ್ಗದರ್ಶನದಲ್ಲಿ ಶಿರಸಿ ವಲಯ ಅರಣ್ಯಾಧಿಕಾರಿ ಗಿರೀಶ ಎಲ್. ನಾಯ್ಕ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿದೆ.

ಘಟನೆಗೆ ಸಂಬಂಧಿಸಿದಂತೆ ದಾಂಡೇಲಿಯ ವನ್ಯಜೀವಿ ಸಂಶೋಧನೆ ಮತ್ತು ತರಬೇತಿ ಕೇಂದ್ರದ (WRTC) ವಿಧಿವಿಜ್ಞಾನ ತಜ್ಞರು ಹಾಗೂ ಕೆಟಿಆರ್ ವಿಭಾಗದ ಶ್ವಾನದಳದಿಂದ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಆರೋಪಿತರ ಪತ್ತೆಗಾಗಿ ಕ್ರಮ ಮುಂದುವರಿದಿದೆ.

ಮೃತ ಕಡವೆಯ ಮರಣೋತ್ತರ ಪರೀಕ್ಷೆಯನ್ನು ಪಶುವೈದ್ಯಾಧಿಕಾರಿ ಡಾ. ಪ್ರಶಾಂತ್ ಅವರು ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ನಾರ್ವೆಕರ, ತ್ಯಾಗಲಿ ಗಸ್ತು ಅರಣ್ಯ ಪಾಲಕ ರೋಹಿತ್ ನಾಯ್ಕ ಹಾಗೂ ಅರಣ್ಯ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.