Joida|A case has been registered against eight people at the Ramanagara Police Station after the association reached the point of hand-to-hand combat over the issue of water sports fee hike|
ಜಲಕ್ರೀಡೆಯ ದರ ಏರಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಅಸೋಸಿಯೇಶನ್ ನವರ ನಡುವೆ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿ ಕೊನೆಗೆ ರಾಮನಗರ ಪೋಲಿಸ್ ಠಾಣೆಯಲ್ಲಿ ಎಂಟು ಜನರ ಮೇಲೆ ಪ್ರಕರಣ ದಾಖಲಾಗಿದೆ.
ದಾಂಡೇಲಿಯ ಶ್ಯಾಮಲ, ಕರೀಮ ಕತೀಬ, ಸಂಜು, ನಂದ್ಯಾಳಕರ, ಉದಯ, ಜೋಸೇಫ್ ಬೈಲಾ, ಸಚೀನ ಕಾಳೋಜಿ ಹಾಗೂ ಗಣೇಶಗುಡಿ ಇಳವಾದ ಚಾಂದ ಕುಟ್ಟಿ ಸೇರಿದಂತೆ ಒಟ್ಟು ಎಂಟು ಜನರ ಮೇಲೆ ಪ್ರಕರಣ ದಾಖಲಾಗಿದೆ.
ಕಾಳಿ ನದಿಯಲ್ಲಿ ಜಲಕ್ರೀಡೆ ಚಟುವಟಿಕೆ (Water Sports Activities) ನಡೆಸಲು ಶುಲ್ಕ ಏರಿಕೆ ಮಾಡಿದ್ದರಿಂದ ಈ ಬಗ್ಗೆ ಮಾತುಕತೆ ಮಾಡಲು ಸುಪಾ ಅಸೋಸಿಯೇಶನ್ ಸದಸ್ಯರು ಗಣೇಶಗುಡಿ ಇಳವಾದಲ್ಲಿರುವ `ಓನ್ ಕೌಂಟರ್‌ಗೆ ಆಗಮಿಸಿದ್ದರು. ಆಗ ಸ್ಥಳದಲ್ಲಿದ್ದ ಹದಿನೈದು ಇಪ್ಪತ್ತು ಸದಸ್ಯರ ನಡುವೆ ಮೊದಲು ಮಾತಿಗೆ ಮಾತು ಬೆಳೆದು, ನಂತರ ಕೈ ಕೈ ಮಿಲಾಯಿಸಿ ಕೊನೆಗೆ ದೂಡಾಡುತ್ತಾ ಹೊಡೆದಾಡಿಕೊಂಡಿದ್ದಾರೆ.
ಆಗ ಸ್ಥಳಕ್ಕೆ ಆಗಮಿಸಿದ ರಾಮನಗರ ಠಾಣೆಯ ಪೋಲಿಸರು ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆದು ಘಟನೆಯಲ್ಲಿ ಭಾಗಿಯಾಗಿದ್ದ ಎಂಟು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಕಾಳಿನದಿಯಲ್ಲಿ ನಡೆಸಲಾಗುತ್ತಿರುವ ಜಲಕ್ರೀಡೆ ಚಟುವಟಿಕೆಯಲ್ಲಿನ ಸುರಕ್ಷತೆ, ಪರವಾನಿಗೆ ಅಲ್ಲದೇ ಅಲ್ಲಿ ವಿಧಿಸಲಾಗುತ್ತಿರುವ ಶುಲ್ಕ ಹಾಗೂ ಹಲವು ವಿಚಾರಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರು ಸೇರಿದಂತೆ ಸಾಕಷ್ಟು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಅಪಾಯಕಾರಿ ಜಲಕ್ರೀಡಾ ಚಟುವಟಿಕೆ ನಡೆಸುವಾಗ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ನಡೆಸಲಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಪ್ರವಾಸೋದ್ಯಮ ಅಧಿಕಾರಿಗಳು ಹಾಗೂ ಪೋಲಿಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಈ ‘ಲಾಬಿ`ಗೆ ಮಟ್ಟಹಾಕುತ್ತಾರೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.
