Siddapur| ನ್ಯಾಯಾಲಯಕ್ಕೆ ಹಾಜರಾಗದೇ ಕಳೆದ ಮೂರು ತಿಂಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಗೆ ಸಿದ್ದಾಪುರದ JMFC ನ್ಯಾಯಾಲಯವು ಮೂರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸಿದ್ದಾಪುರನಲ್ಲಿ ನಡೆದ ಪ್ರಕರಣವೊಂದರ ಎರಡನೇಯ ಆರೋಪಿಯಾಗಿದ್ದ ಶಿಕಾರಿಪುರ ತಾಲೂಕಿನ ಹಳ್ಳೂರಕೇರಿ ನಿವಾಸಿ ಜಿಯಾವುಲ್ಲಾ ತಂದೆ ಬಾಷಾಸಾಬ್ ಎಂಬಾತ ನ್ಯಾಯಾಲಯದ ಆವರಣದಿಂದ ಪರಾರಿಯಾಗಿದ್ದ, ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಏಪ್ರಿಲ್ 6, 2026 ರಂದು ಭಟ್ಕಳದಲ್ಲಿ ಪೊಲೀಸರು ಬಂಧಿಸಿ ಸಿದ್ದಾಪುರದ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ಮೂರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್ಐ ಶಾಂತಿನಾಥ ಪಾಸಾನೆ ಹಾಗೂ ಸಿಬ್ಬಂದಿಗಳಾದ ಚೇತನಕುಮಾರ, ಅನಿಲ್ ನಾಯ್ಕ, ಪ್ರಸನ್ನ ನಾಯ್ಕ, ಭರತಕುಮಾರ, ಶಶಿಕಾಂತ ಮತ್ತು ಮೋಹನ್ ಲಮಾಣಿ ಉತ್ತಮ ಕಾರ್ಯ ನಿರ್ವಹಿಸಿದ್ದರು.
