Karwar| ಮುಂಬರುವ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಕಾರ್ಯಕರ್ತರು ಈಗಲೇ ಸಿದ್ಧರಾಗಬೇಕು. ಜೊತೆಗೆ ಮತದಾರರ ಪಟ್ಟಿಯಲ್ಲಿ ಡಿಲೀಟ್ ಆದ ಸಂಖ್ಯೆಯನ್ನು ತೆಗೆಯುವ ಮತ್ತು ಹೊಸದಾಗಿ ಸೇರ್ಪಡೆ ಆಗಬೇಕಾದವರನ್ನು ಸೇರಿಸುವ ಬಗ್ಗೆ ಬಿಎಲ್ ಎ 2 ಹಾಗೂ ಬೂತ್ ಅಧ್ಯಕ್ಷರು ಗಮನ ಕೊಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ವಿನಂತಿಸಿದರು.

ಅವರು ಕಾರವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ರವಿವಾರ ನಡೆದ ಕ್ಷೇತ್ರದ ಬಿಎಲ್ ಎ 1 ಹಾಗೂ ಬಿಎಲ್ ಎ 2 ಕಾರ್ಯಾಗಾರ ಹಾಗೂ ವಿಶೇಷ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಭೆ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಈ ಬಗ್ಗೆ ಬಿಜೆಪಿ ಕಾರ್ಯಕರ್ತರೆಲ್ಲರೂ ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ ಬಿಎಲ್ ಎ 2 ಕಾರ್ಯಾಗಾರ ಬಗ್ಗೆ ವಿಶೇಷ ಮಾಹಿತಿ ನೀಡಿದರು,

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಸಂಜಯ್ ಸಾಳುಂಕೆ, ನಗರಸಭೆ ಮಾಜಿ ಅಧ್ಯಕ್ಷ ರವಿರಾಜ್ ಅಂಕೋಲೆಕರ, ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾ ಅಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿದರು.

ಆರಂಭದಲ್ಲಿ ಭಾರತಾಂಬೆಗೆ ಪುಷ್ಪ ಸಮರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು‌.

ಸಭೆಯಲ್ಲಿ ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬಳೆ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳು, ನಗರ ಸಭಾ ಮಾಜಿ ಸದಸ್ಯರುಗಳು, ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಹಾಗೂ ಮಂಡಲ ಪ್ರಮುಖರು, ಪದಾಧಿಕಾರಿಗಳು, ಎಲ್ಲಾ ಮೋರ್ಚಾದವರು, ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರದವರು, ಬೂತ್ ಅಧ್ಯಕ್ಷರು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪಕ್ಷದ ನಗರ ಪ್ರಧಾನ ಕಾರ್ಯದರ್ಶಿ ಅಶೋಕ್ ಗೌಡ ನಿರೂಪಿಸಿದರು.