Bedthi-Kali River|Haveri| ಬೇಡ್ತಿ – ವರದಾ ನದಿ ಜೋಡಣೆಯ ಡಿಪಿಆರ್ ನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದ್ದು, ಅವರು ತೀರ್ಮಾನ ಕೈಗೊಳ್ಳಬೇಕಾಗಿದೆ. ಕೇಂದ್ರ ಸರ್ಕಾರ ಯಾವುದರ ಬಗ್ಗೆಯೂ ತೀರ್ಮಾನ ಮಾಡುತ್ತಿಲ್ಲ. ಹಾಗಾಗಿ ನಮಗೆ ಅವರು ತೀರ್ಮಾನ ಕೈಗೊಳ್ಳುವ ಬಗ್ಗೆ ಭರವಸೆಯಾಗಲಿ, ನಂಬಿಕೆಯಾಗಲಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಾವೇರಿಯ ಸರ್ಕಾರಿ ಮೆಡಿಕಲ್ ಕಾಲೇಜು ಆವರಣದ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿ, ನದಿ ಜೋಡಣೆ ಸಂಬಂಧಿಸಿದಂತೆ ಉತ್ತರಕನ್ನಡ ಜಿಲ್ಲೆಯ ಜನತೆ ಹೋರಾಟಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಸಿಎಂ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

10 ಸಾವಿರ ಕೋಟಿ ರೂ. ವೆಚ್ಚದ ಬೇಡ್ತಿ- ವರದಾ ನದಿ ತಿರುವು ಯೋಜನೆಯಾಗಿದೆ. ಈ ಯೋಜನೆಗೆ ಕೇಂದ್ರ 9 ಸಾವಿರಕೋಟಿ ರೂ. ಹಾಗೂ ರಾಜ್ಯ 1‌ಸಾವಿರ ಕೋಟಿ ರೂ. ಪಾಲು ನೀಡಲು ಉದ್ದೇಶಿಸಲಾಗಿತ್ತು. ಆದರೆ, ಕೇಂದ್ರಕ್ಕೆ ಕಳುಹಿಸಲಾದ ಡಿಪಿಆರ್‌ಗೆ ಯಾವುದೇ ಪ್ರತಿಕ್ರಿಯೆ ದೊರಕದಿರುವುದರಿಂದ ಸಿಎಂ, ಅಸಾಮಾಧಾನಗೊಂಡಿದ್ದು, ಭವಿಷ್ಯದಲ್ಲಿ ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.

ಇನ್ನು ಬಿಜೆಪಿಯವರು ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ಧರಾಮಯ್ಯ, ಬಿಜೆಪಿಯವರು ಹೊಟ್ಟೆಕಿಚ್ಚಿನಿಂದ ವಿರೋಧಿಸುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದ ನಾಲ್ಕು ವರ್ಷಗಳ ಕಾಲ ಏನೂ ಮಾಡಿರಲಿಲ್ಲ ಎಂದರು.

ನಮ್ಮನ್ನು ಟೀಕಿಸಲು ಬಿಜೆಪಿಗೆ ನೈತಿಕ ಹಕ್ಕಿಲ್ಲ. ನಾಲ್ಕು ವರ್ಷಗಳಲ್ಲಿ ಅವರು ಏನು ಮಾಡಿದ್ದಾರೆ. 2018 ರಲ್ಲಿ 600 ಭರವಸೆಗಳನ್ನು ಕೊಟ್ಟಿದ್ದರು. ಅದರಲ್ಲಿ ಶೇ.10 ರಷ್ಟೂ ಈಡೇರಿಸಿಲ್ಲ. ನಾವು ನೀಡಿದ್ದ 592 ಭರವಸೆಗಳಲ್ಲಿ 243 ಭರವಸೆಗಳನ್ನು ಎರಡೂವರೆ ವರ್ಷಗಳಲ್ಲಿ ಈಡೇರಿಸಿದ್ದೇವೆ. ಉಳಿದವನ್ನು ಈಡೇರಿಸಲು ಪ್ರಯತ್ನಿಸುತ್ತೇವೆ ಎಂದರು.

ಅಧಿಕಾರ ಹಂಚಿಕೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಪಕ್ಷದ ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳಲಾಗುವುದು ಎಂದು ಈಗಾಗಲೇ ತಿಳಿಸಲಾಗಿದೆ. ವರಿಷ್ಠರು ಹೇಳಿದ್ದನ್ನು ಪಕ್ಷದ ಎಲ್ಲರೂ ಕೇಳಬೇಕು ಎಂದರು.

ಹೈ ಕಮಾಂಡ್ ಶಿವರಾತ್ರಿಯ ನಂತರ ಬದಲಾವಣೆ ಎಂದು ಹೇಳಿದ್ದಾರೆಯೇ ಎಂಬ ಪ್ರಶ್ನೆಗೆ ಅವರು, ದೆಹಲಿಗೆ ಕರೆದಾಗ ಹೋಗುವುದಾಗಿ ತಿಳಿಸಿ, ಅಧಿಕಾರ ಹಂಚಿಕೆಯ ಬಗ್ಗೆ ಈಗಾಗಲೇ ಉತ್ತರಿಸಿದ್ದು, ಈ ಬಗ್ಗೆ ಪದೇ ಪದೇ ಪ್ರಶ್ನೆ ಕೇಳಬೇಡಿ ಎಂದರು.

ಸಾಮಾಜಿಕ , ಶೈಕ್ಷಣಿಕ ಸಮೀಕ್ಷೆಯ ವರದಿ ಶೀಘ್ರದಲ್ಲಿಯೇ ಸಲ್ಲಿಕೆಯಾಗಲಿದ್ದು, ಅದರ ಮೇಲೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಶಿವಾನಂದ ಪಾಟೀಲ್, ಹೆಚ್.ಕೆ.ಪಾಟೀಲ್ ಸೇರಿದಂತೆ ಹಲವರು ಇದ್ದರು.