Karwar| ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬರಲು ಬಿಜೆಪಿ ಹಗಲು ಕನಸು ಕಾಣುತ್ತಿದೆ ಎಂದು ಕೆಪಿಸಿಸಿ ವಕ್ತಾರ ಕೆ. ಶಂಭು ಶೆಟ್ಟಿ ವ್ಯಂಗವಾಡಿದ್ದಾರೆ.

ಶುಕ್ರವಾರ ಕಾರವಾರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಿದ್ಧವಿದೆ ಎಂದು ನೀಡಿದ ಹೇಳಿಕೆ ಆ ಪಕ್ಷದ  ಅಧಿಕಾರದ ದಾಹವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. 

 ಕರ್ನಾಟಕದಲ್ಲಿ ಬಿಜೆಪಿಗೆ ಜನತೆ ಎಂದಿಗೂ ಪೂರ್ಣ ಬಹುಮತ ನೀಡಿಲ್ಲ. 2008ರಲ್ಲಿ ಸ್ವತಂತ್ರ ಅಭ್ಯರ್ಥಿಗಳ ಬೆಂಬಲದಿಂದ ಅಲ್ಪಮತದ ಸರ್ಕಾರ ರಚಿಸಿದ ಬಿಜೆಪಿ ನಂತರ ‘ಆಪರೇಷನ್ ಕಮಲ’ ಮೂಲಕ ಬಹುಮತ ಗಟ್ಟಿಮಾಡಿಕೊಂಡಿತ್ತು. 2019ರಲ್ಲೂ ಆಪರೇಷನ್ ಕಮಲದ ಮೂಲಕವೇ ಬಿಜೆಪಿ ಹಿಂಬಾಗಿಲಿನಿಂದ  ಸರ್ಕಾರ ರಚಿಸಿತ್ತು ಎಂದು ಶೆಟ್ಟಿ ಟೀಕಿಸಿದರು.

ಪ್ರಸ್ತುತ ಪ್ರಚಂಡ ಬಹುಮತದೊಂದಿಗೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಶೋಷಿತ ಸಮುದಾಯಗಳಿಗೆ ಭರವಸೆ ಮೂಡಿಸಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದೆ. ಇಂತಹ ಸ್ಥಿರ ಸರ್ಕಾರದ ಪತನವನ್ನು ನಿರೀಕ್ಷಿಸುವುದು ಬಿಜೆಪಿಯ ಹಗಲು ಕನಸಾಗಿಯೇ ಉಳಿಯಲಿದೆ ಎಂದು ಅವರು ಹೇಳಿದರು.

ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಘೋಷಣೆ ಮಾಡಿರುವುದನ್ನು ಬಿಜೆಪಿಯವರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯನ್ನು ಜಿಲ್ಲೆಗೆ ಕರೆತಂದು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ. ಆದರೆ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಶಾಸಕರು ತಮ್ಮ ಮುಖ್ಯಮಂತ್ರಿಯನ್ನು ಜಿಲ್ಲೆಗೆ ತರಲು ವಿಫಲರಾಗಿದ್ದರು ಎಂದು ವ್ಯಂಗ್ಯವಾಡಿದರು.

ಸ್ಪಷ್ಟ ಬಹುಮತ ಹೊಂದಿ ಆಡಳಿತ ನಡೆಸುತ್ತಿರುವ ಸುಭದ್ರ ಸರ್ಕಾರದ ಪತನದ ಕನಸು ಕಾಣುತ್ತಿರುವ ಬಿಜೆಪಿ ನಡೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಶಂಭು ಶೆಟ್ಟಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.