Banavasi | ಗಡಿಪಾರು ಆದೇಶವನ್ನು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ರೌಡಿ‌ ಶೀಟರ್ ಆಸಾಮಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಬದನಗೋಡ ಗ್ರಾಮದ ನಿವಾಸಿ ಸ್ವಾಮೇಲಾ @ ಸುನೀಲ್ ತಂದೆ ಚಂದ್ರಪ್ಪ ಭೋವಿವಡ್ಡರ (24) ಬಂಧಿತ ಆರೋಪಿ. ಈತನ ವಿರುದ್ಧ ಬನವಾಸಿ ಪೊಲೀಸ್ ಠಾಣೆಯಲ್ಲಿ 2024 ಮತ್ತು 2025ನೇ ಸಾಲಿನಲ್ಲಿ ಒಟ್ಟು 6 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಈತನ ಚಟುವಟಿಕೆಗಳ ಮೇಲೆ ನಿಗಾ ಇಡಲು ರೌಡಿ ಹಾಳೆ ತೆರೆಯಲಾಗಿತ್ತು. ಆದರೂ ರೌಡಿ ಚಟುವಟಿಕೆಗಳನ್ನು ಮುಂದುವರಿಸಿದ್ದರಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರ ಮೂಲಕ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55(ಎ) ಮತ್ತು (ಬಿ) ಅಡಿ ಗಡಿಪಾರು ವರದಿ ಸಲ್ಲಿಸಲಾಗಿತ್ತು.

ಅದರಂತೆ ಶಿರಸಿ ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳು 2026ರ ಮಾರ್ಚ್ 16 ರಂದು ಗಡಿಪಾರು ಆದೇಶ ಹೊರಡಿಸಿದ್ದರು. ಆದೇಶದಂತೆ ಆರೋಪಿಯನ್ನು ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ, 17-03-2026 ರಂದು ಯಾದಗಿರಿ ನಗರ ಪೊಲೀಸ್ ಠಾಣೆಯ ಮುಂದೆ ಹಾಜರುಪಡಿಸಲಾಗಿತ್ತು. ಆದರೆ ನಂತರದ ದಿನಗಳಿಂದ ಠಾಣೆಗೆ ಹಾಜರಾಗದೆ ಗೈರು ಹಾಜರಾಗಿದ್ದರಿಂದ ಗಡಿಪಾರು ಆದೇಶ ಉಲ್ಲಂಘನೆ ಮಾಡಿದ ಆರೋಪದಡಿ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಶಿರಸಿ ವೃತ್ತ ನಿರೀಕ್ಷಕ ಸಂಪತ್ ಈ.ಸಿ. ಅವರ ಮಾರ್ಗದರ್ಶನದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು.

ಪತ್ತೆ ಕಾರ್ಯಾಚರಣೆ ವೇಳೆ ಜೂನ್ 23ರಂದು ದಾಸನಕೊಪ್ಪ ಕೆ.ಇ.ಬಿ ಗ್ರಿಡ್ ಬಳಿ ಆರೋಪಿ ಇರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಸ್ವಾಮೇಲಾ @ ಸುನೀಲ್ ಚಂದ್ರಪ್ಪ ಭೋವಿವಡ್ಡರನನ್ನು ಬಂಧಿಸಿದ್ದಾರೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.