CM Siddaramiah Visit|ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಫೆ.22 ಕ್ಕೆ ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮುಖ್ಯಮಂತ್ರಿ ಅವರು ಹೆಲಿಕಾಪ್ಟರ್ ಮೂಲಕ ಆಗಮಿಸುತ್ತಿರುವ ಕಾರಣ ಅಂಕೋಲಾ ಬಾಸ್ಗೋಡದ ನಡುಬೇಣ ಹಾಗೂ ಕಾರವಾರದ ಮಾಲಾ‌ದೇವಿ ಮೈದಾನದಲ್ಲಿ ತಾತ್ಕಾಲಿಕವಾಗಿ ಹ್ಯಾಲಿಪೆಡ್ ನಿರ್ಮಿಸಲಾಗಿದ್ದು, ಅದಕ್ಕೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಅಲ್ಲದೆ ಈಗಾಗಲೇ ಪೋಲಿಸ್ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರ ತಂಡವು ಹೆಲಿಪ್ಯಾಡ್ ಪರಿಶೀಲನೆ ನಡೆಸಿವೆ.

ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಬೃಹತ್ ವೇದಿಕೆ ಸಿದ್ದವಾಗುತ್ತಿದೆ. ನಾಳೆ ಬೆಳಗ್ಗೆ 11.50 ಕ್ಕೆ ಹೆಲಿಕಾಪ್ಟರ್ ಮೂಲಕ ಅಂಕೋಲಾ ತಾಲೂಕಿಗೆ ಭೇಟಿ ನೀಡುವ ಅವರು ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಉದ್ಘಾಟಿಸಲಿದ್ದಾರೆ.

ಬಳಿಕ ಮಧ್ಯಾಹ್ನ 12.45 ಕ್ಕೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮತ್ತು ಯಲ್ಲಾಪುರ ತಾಲೂಕಿನ ಖಾನಾಪುರ ತಾಳಗುಪ್ಪ ರಾಜ್ಯ ಹೆದ್ದಾರಿ-93 ರ ಕಿ.ಮೀ 82.50 ರಲ್ಲಿ ಸೇತುವೆ ನಿರ್ಮಾಣ, ಯಲ್ಲಾಪುರ ಪಟ್ಟಣದ ನಿರೀಕ್ಷಣಾ ಮಂದಿರದ ಹೊಸ ಕಟ್ಟಡ ನಿರ್ಮಾಣ ಹಾಗೂ ಮುಂಡಗೋಡ ತಾಲೂಕಿನ ಹೊಸ ಪ್ರವಾಸಿ ಮಂದಿರ ನಿರ್ಮಾಣ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳ ಬಂದೋಬಸ್ತಿಗೆ ಆರು ಕೆಎಸ್‌ಆರ್‌ಪಿ ತುಕಡಿಗಳು, 10 ಡಿಎಆರ್ ತುಕಡಿ, ಮೂರು ಕ್ವಿಕ್ ರೆಸ್ಪಾನ್ಸ್ ತಂಡ, 82 ಪಿಎಸ್‌ಐ, 200 ಗೃಹರಕ್ಷಕ ಸಿಬ್ಬಂದಿ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎಸ್ ಹಾಗೂ ಪಶ್ಚಿಮ ವಲಯದ ಐಜಿ ಅಮಿತ್ ಸಿಂಗ್ ಭಾಗವಹಿಸಲಿದ್ದಾರೆ.