ಬನವಾಸಿ: ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅಡಿಯಲ್ಲಿ ಬನವಾಸಿಯ ವರದಾ ನದಿಯಲ್ಲಿ ನಿರ್ಮಿಸಲಾದ ಲಿಫ್ಟ್ ಇರಿಗೇಷನ ನಿಂದ ಬನವಾಸಿ ವಲಯದ ಕೆರೆಗಳನ್ನು ತುಂಬಿಸಲು ಇದೀಗ ಸಕಾಲವಾಗಿದ್ದು ಕೂಡಲೇ ಕೆರೆಗಳನ್ನು ತುಂಬಿಸಿ ರೈತರಿಗೆ ಉಪಯೋಗ ಆಗುವಂತೆ ಸರ್ಕಾರ ನೆರವಿಗೆ ಬರಬೇಕೆಂದು ಬನವಾಸಿ ನೂತನ ತಾಲೂಕು ರಚನಾ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಈ ಕುರಿತು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ, ಗೌರವಾಧ್ಯಕ್ಷ ಸಿ.ಎಫ್. ನಾಯ್ಕ ಮಾಳಂಜಿ, ಕಾರ್ಯದರ್ಶಿ ವಿಶ್ವನಾಥ್ ಒಡೆಯರ್ ಜಂಟಿ ಹೇಳಿಕೆಯಲ್ಲಿ ಈ ಆಗ್ರಹ ಮಾಡಿದ್ದು ಬನವಾಸಿ – ಯಲ್ಲಾಪುರ – ಮುಂಡಗೋಡ ಕ್ಷೇತ್ರದ ಜನಪ್ರಿಯ ಶಾಸಕ ಶಿವರಾಮ ಹೆಬ್ಬಾರ ಅವರು ಈ ದಿಶೆಯಲ್ಲಿ ಸಂಪೂರ್ಣ ಪ್ರಯತ್ನ ಮಾಡಬೇಕಾಗಿ ಕೇಳಿಕೊಂಡಿದ್ದಾರೆ.

ಮದ್ಯ ಮಳೆಗಾಲದ ಈ ಸಮಯದಲ್ಲಿ ಬಾರಿ ಮಳೆಯಿಂದ ಪ್ರವಾಹ ಸೃಷ್ಟಿಸುವ ಸಂದರ್ಭದಲ್ಲಿ ರಣ ರಣ ಬಿಸಿಲು ಬೀಳುತ್ತಿದೆ. ಅನಾವೃಷ್ಟಿ ಎದುರಾಗುವ ಮುನ್ಸೂಚನೆ ಎದ್ದು ಕಾಣುತ್ತಿದ್ದು, ಇದೀಗ ವರದಾ ನದಿಯಿಂದ ಹೆಚ್ಚುವರಿಯಾಗಿ ಹರಿದು ಹೋಗುತ್ತಿರುವ ನೀರನ್ನು ಬನವಾಸಿ ವಲಯ ವ್ಯಾಪ್ತಿಯ ಕೆರೆಗಳನ್ನು ತುಂಬಿಸಿ ರೈತರಿಗೆ ಉಪಯೋಗ ವಾಗುವ ನಿಟ್ಟಿನಲ್ಲಿ ಕೆಲಸ ಆಗಬೇಕಾಗಿದೆ. ಈ ರೀತಿ ಕೆರೆಗಳನ್ನು ತುಂಬಿಸುವುದರಿಂದ ಬನವಾಸಿ ವಲಯ ವ್ಯಾಪ್ತಿಯ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಾಗುವುದಲ್ಲದೇ ದೀರ್ಘ ಕಾಲ ನೀರಿನ ಸೆಲೆ ಇರುತ್ತದೆ.ಉದಾಹರಣೆಗೆ ಗುಡ್ನಾಪುರ ಕೆರೆ ಹಾಗೂ ರಾಮತೀರ್ಥ ಕೆರೆ ತುಂಬಿಸುವುದರಿಂದ ಬನವಾಸಿ ಗುಡ್ನಾಪುರ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ಭಾವಿಗಳಲ್ಲಿ ಅಂತರ್ಜಲ ಮತ್ತು ನೀರಿನ ಮಟ್ಟ ಹೆಚ್ಚಾಗಿ ಅನುಕೂಲ ಆಗುತ್ತದೆ. ಹೀಗೆ ಈ ಬಾಗದಲ್ಲಿ ಕೃಷಿ ಕಾರ್ಯಗಳಿಗೆ, ಕುಡಿಯುವ ನೀರಿಗೆ ಆಧಾರವಾಗುತ್ತದೆ.

ಬನವಾಸಿ ವರದಾ ನದಿಯ ಮುಖಾಂತರ ಕೆರೆ ತುಂಬಿಸುವ ಯೋಜನೆ ಈ ಭಾಗಕ್ಕೆ ತಂದು ಈ ಬಾಗದ ಅಭಿವೃದ್ಧಿ ದಿಶೆಯಲ್ಲಿ ಮುಂಜಾಗ್ರತವಾಗಿ ದೊಡ್ಡ ಯೋಜನೆ ವರದಾನವಾಗಿ ನೀಡಿದ ಶಾಸಕ ಶಿವರಾಮ ಹೆಬ್ಬಾರ ಅವರ ಕಾರ್ಯ ಶ್ಲಾಘನೀಯ. ಈಗ ಶಾಸಕರು ಮುತುವರ್ಜಿ ವಹಿಸಿ ಬನವಾಸಿ ವಲಯ ವ್ಯಾಪ್ತಿಯ ಕೆರೆಗಳನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.