Haliyal| ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕಾಳಿ ನದಿ ನೀರು ಯೋಜನೆ ಕಳೆದ 9 ವರ್ಷಗಳಿಂದ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆ ಆಕ್ರೋಶಗೊಂಡ ಕಬ್ಬು ಬೆಳೆಗಾರರು ಫೆ.27 ರಿಂದ ಪಾದಯಾತ್ರೆ ಹಾಗೂ ನಿರಂತರ ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಕಾಳಿ ನದಿಯಿಂದ ಕೆರೆಗಳು, ಬಾಂದಾರುಗಳಿಗೆ ನೀರು ತುಂಬಿಸುವ ಯೋಜನೆ, ಪಟ್ಟಣದ ಒಳಚರಂಡಿ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ 784 ಕೋಟಿ ರೂ.ಗೂ ಅಧಿಕ ಮೊತ್ತದ ವಿವಿಧ ಕಾಮಗಾರಿಗಳಿಗೆ 2017 ರಲ್ಲಿ ಅಡಿಗಲ್ಲು ನೆರವೇರಿಸಿ ಭಾರೀ ಪ್ರಚಾರ ಪಡೆಯಲಾಗಿತ್ತು.
ಆದರೆ, ಒಂಬತ್ತು ವರ್ಷಗಳಾದರೂ ಒಂದೇ ಒಂದು ಯೋಜನೆಯೂ ಪೂರ್ಣಗೊಂಡಿಲ್ಲ. ಇದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಯವರ ಅಸಡ್ಡೆತನ ಎಂದು ಕಬ್ಬು ಬೆಳೆಗಾರರ ಹಿತ ಸಂರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಆರೋಪಿಸಿದ್ದಾರೆ.
ಈ ಕುರಿತು ಅವರು ಹಳಿಯಾಳ ಪಟ್ಟಣದ ಮರಾಠ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಬ್ಬು ಬೆಳೆಗಾರ ಸಂಘ ಹಾಗೂ ಕಬ್ಬು ಬೆಳೆಗಾರರ ಹಿತ ಸಂರಕ್ಷಣಾ ಸಮಿತಿ ವತಿಯಿಂದ ಫೆ. 27ರಿಂದ ಪಟ್ಟಣದ ಮರಾಠ ಭವನದಿಂದ ಪಾದಯಾತ್ರೆ ಆರಂಭಿಸಿ, ಬಳಿಕ ಹಳ್ಳಿಗಳಿಗೆ ಭೇಟಿ ನೀಡಿ ನೀರಿಗಾಗಿ ಜನಜಾಗೃತಿ ಮೂಡಿಸಲಾಗುತ್ತದೆ. ಹಳಿಯಾಳ ಪಟ್ಟಣದಲ್ಲಿ ನಿರಂತರ ಪ್ರತಿಭಟನೆ ನಡೆಸಲಿದ್ದು, ನೀರು ಬರುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.
ಯೋಜನೆಯ ಎಲ್ಲಾ ಕಾಮಗಾರಿಗಳು 2019-20 ರೊಳಗೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ನಿಗದಿತ ಅವಧಿ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೇ, ರೈತರು ನೀರಿಗಾಗಿ ಬಕ್ಕಪಕ್ಷಿಯಂತೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಯೋಜನೆ ಏಳು ವರ್ಷಗಳ ಹಿಂದೆಯೇ ಕಾರ್ಯರೂಪಕ್ಕೆ ಬರಬೇಕಾಗಿದ್ತೂ ಅದಿನ್ನೂ ನೆಲಮಟ್ಟದಲ್ಲೇ ಉಳಿದಿದೆ. ನೀರಿನ ಕೊರತೆಯಿಂದ ಬೇಸತ್ತು ರೈತರು ಸಾವಿರಾರು ಬೋರ್ವೆಲ್ಗಳನ್ನು ಕೊರೆಯಿಸಿದ್ದು, ಒಂದೊಂದು ಬೋರ್ವೆಲ್ಗೆ 1 ಲಕ್ಷ ರೂ.ಗೂ ಅಧಿಕ ವೆಚ್ಚ ಬರುತ್ತಿದೆ. ಇದರಿಂದ ರೈತರ ಮೇಲಿನ ಸಾಲದ ಹೊರೆ ಹೆಚ್ಚಾಗಿದೆ ಎಂದರು.
ಈ ಯೋಜನೆಗಾಗಿ 2003ರಿಂದಲೇ ರೈತರು ನಿರಂತರ ಹೋರಾಟ ನಡೆಸಿದ್ದು, ಅನೇಕ ಬಾರಿ ಚುನಾವಣೆಗೂ ಇದು ಪ್ರಮುಖ ವಿಷಯವಾಗಿತ್ತು. ಯೋಜನೆ ಮಂಜೂರಾತಿ ಪಡೆಯಲು ಸಾಕಷ್ಟು ವರ್ಷ ಹೋರಾಟ ನಡೆದಿತ್ತು. ಆದರೆ, ಯೋಜನೆ ಮಂಜೂರಾದ ನಂತರವೂ ಒಂಬತ್ತು ವರ್ಷಗಳ ಕಾಲ ಕಾಮಗಾರಿ ಪೂರ್ಣಗೊಳ್ಳದೇ ಇರುವುದು ದುರಂತ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಅಶೋಕ್ ಮೇಟಿ, ಕುಮಾರ್ ಬೊಬಾಟಿ, ಸಾತುರಿ ಗೋಡಿಮನಿ, ಸುರೇಶ ಶಿವನ್ನವರ ರಾಮದಾಸ್ ಬೆಳಗಾಂವಕರ, ಮಹೇಶ್ ಪಾಳೆಕರ, ಪುಂಡ್ಲಿಕ ಗೋಡಿಮನಿ ನಕುಲ್ ಕೆಂಚನವರ ಉಪಸ್ಥಿತರಿದ್ದರು.
