ಅಂಕೋಲಾ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಲೈಕ್‌, ಶೇರ್‌ ಮತ್ತು ಫಾಲೋವರ್ಸ್‌ ಗಳಿಸುವ ಉದ್ದೇಶದಿಂದ ಕ್ಷತ್ರಿಯ ಕೋಮಾರಪಂತ ಸಮಾಜದ ವಿಶಿಷ್ಟ ಆಡುಭಾಷೆಯನ್ನು ಅಣಕಿಸಿ ರೀಲ್ಸ್‌ ಮಾಡಿದ್ದ ಯುವತಿಗೆ ಇದೀಗ ಸಂಕಷ್ಟ ಎದುರಾಗಿದೆ. ಈ ರೀಲ್ಸ್‌ ಸಮಾಜದ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದ್ದು, ಯುವತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಮಾಜದ ಮುಖಂಡರು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರುದಾರರ ಪ್ರಕಾರ, ಇತರ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳು ಕೋಮಾರಪಂತ ಸಮಾಜದ ಆಡುಭಾಷೆಯನ್ನು ಹಾಸ್ಯ ಮತ್ತು ಅಪಹಾಸ್ಯ ಮಾಡುವ ರೀತಿಯಲ್ಲಿ ರೀಲ್ಸ್‌ ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಸಮಾಜದ ಸದಸ್ಯರ ಭಾವನೆಗಳಿಗೆ ಧಕ್ಕೆಯಾಗಿದ್ದು, ಭಾಷೆ ಮತ್ತು ಸಂಸ್ಕೃತಿಯ ಗೌರವಕ್ಕೆ ಅವಮಾನವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದೇ ವೇಳೆ, ಈ ರೀಲ್ಸ್‌ಗೆ ಆಕ್ಷೇಪ ವ್ಯಕ್ತಪಡಿಸಿದ ಸಮಾಜದ ಯುವಕರಿಗೆ ಸಾಮಾಜಿಕ ಜಾಲತಾಣದಲ್ಲೇ ಅಸಭ್ಯ ಪದಗಳನ್ನು ಬಳಸಿ ಪ್ರತಿಕ್ರಿಯೆ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಬೆಳವಣಿಗೆ ಸಮಾಜದಲ್ಲಿ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಕೋಮಾರಪಂತ ಸಮಾಜದ ಪ್ರಮುಖ ಸಂಜಯ ನಾಯ್ಕ ಅವರ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಸಮಾಜದ ಪ್ರಮುಖರು ಹಾಗೂ ಯುವಕರು ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ಸಲ್ಲಿಸಿದರು. ನಿಯೋಗದಲ್ಲಿ ವಿಜಯಕುಮಾರ ನಾಯ್ಕ, ಗಣಪತಿ ನಾಯ್ಕ, ಚಂದ್ರಕಾಂತ ನಾಯ್ಕ, ಮಾರುತಿ ನಾಯ್ಕ, ವಿನೋದ ನಾಯ್ಕ ಸೇರಿದಂತೆ ಸಮಾಜದ ಅನೇಕ ಮುಖಂಡರು ಮತ್ತು ಯುವಕರು ಉಪಸ್ಥಿತರಿದ್ದರು.

ದೂರು ಸ್ವೀಕರಿಸಿದ ಪೊಲೀಸ್ ನಿರೀಕ್ಷಕ ಚಂದ್ರಶೇಖರ್ ಮಠಪತಿ, ಪ್ರಕರಣವನ್ನು ಕಾನೂನಿನ ಚೌಕಟ್ಟಿನೊಳಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಜಯ ನಾಯ್ಕ, “ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ವೇದಿಕೆಯಾಗಿದ್ದರೂ, ಯಾವುದೇ ಸಮುದಾಯದ ಭಾಷೆ, ಸಂಸ್ಕೃತಿ ಮತ್ತು ಗೌರವವನ್ನು ಅವಹೇಳನ ಮಾಡುವ ಹಕ್ಕು ಯಾರಿಗೂ ಇಲ್ಲ. ಇಂತಹ ಕೃತ್ಯಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಅಗತ್ಯ,” ಎಂದು ಆಗ್ರಹಿಸಿದರು.

ಸಮಾಜದ ಭಾಷೆ ಮತ್ತು ಸಂಸ್ಕೃತಿಯ ಗೌರವ ಕಾಪಾಡುವ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಇದೀಗ ಹೆಚ್ಚಿದ್ದು, ಪ್ರಕರಣದ ಕುರಿತು ಪೊಲೀಸ್ ತನಿಖೆಯತ್ತ ಎಲ್ಲರ ಗಮನ ನೆಟ್ಟಿದೆ.