Karwar| ಸರ್ಕಾರಿ ಕಚೇರಿಯ ಟೆರೇಸ್ (ಮೇಲ್ಛಾವಣಿ) ಮೇಲೆ ಸೌರ ವಿದ್ಯುತ್ ಸ್ಥಾವರಗಳನ್ನು ಅಳವಡಿಸಿ, ಕಚೇರಿಯ ವಿದ್ಯುತ್ ವೆಚ್ಚದ ಆರ್ಥಿಕ ಹೊರೆಯನ್ನು ಗಣನೀಯವಾಗಿ ತಗ್ಗಿಸಿ, ಆದಾಯವನ್ನಾಗಿಯೂ ಪರಿವರ್ತಿಸಿಕೊಂಡು, ಹಸಿರು ಶಕ್ತಿಯ ಬಳಕೆಯತ್ತ ಹೆಜ್ಜೆಯಿಟ್ಟು ಮಾದರಿಯಾಗಿದೆ ಉತ್ತರ ಕನ್ನಡ ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗ ಕಚೇರಿ.
ಕಾರವಾರದ ಸಾಮಾಜಿಕ ಅರಣ್ಯ ವಿಭಾಗ ಕಚೇರಿಯಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸುವ ಹಾಗೂ ವಿದ್ಯುತ್ ವೆಚ್ಚವನ್ನು ಕಡಿಮೆಗೊಳಿಸುವ ಉದ್ದೇಶದಿಂದ ರೂ.4.20 ಲಕ್ಷ ವೆಚ್ಚದಲ್ಲಿ 5 ಕಿ.ವ್ಯಾ. ಸಾಮರ್ಥ್ಯದ ಸೌರ ಮೇಲ್ಛಾವಣಿ (Solar Rooftop) ನೆಟ್ ಮೀಟರಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಸದರಿ ವ್ಯವಸ್ಥೆಯು ಏಪ್ರಿಲ್ 2026 ರಿಂದ ಕಾರ್ಯಾರಂಭ ಮಾಡಿದೆ.
ಈ ಸೌರ ಮೇಲ್ಛಾವಣಿ ವ್ಯವಸ್ಥೆಯಿಂದ ಸರಾಸರಿ ತಿಂಗಳಿಗೆ ಸುಮಾರು 600 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಬೇಸಿಗೆ ಅವಧಿಯಲ್ಲಿ ಗರಿಷ್ಠ ಒಂದು ದಿನದಲ್ಲಿ 29.5 ಯೂನಿಟ್ ವಿದ್ಯುತ್ ಉತ್ಪಾದನೆ ದಾಖಲಾಗಿರುತ್ತದೆ. ಪ್ರಸ್ತುತ ಮಳೆಗಾಲದ ಮೋಡ ಕವಿದ ವಾತಾವರಣದಲ್ಲೂ ದಿನಕ್ಕೆ ಸರಾಸರಿ 6 ಯೂನಿಟ್ ವಿದ್ಯುತ್ ಉತ್ಪಾದನೆಯನ್ನು ಕಾಯ್ದುಕೊಂಡಿದೆ. ಸೌರವ್ಯವಸ್ಥೆ ಅಳವಡಿಸುವ ಪೂರ್ವದಲ್ಲಿ ಕಚೇರಿಯ ಮಾಸಿಕ ವಿದ್ಯುತ್ ಬಿಲ್ ಸುಮಾರು ರೂ.5,000 ರಿಂದ 6,000 ರವರೆಗೆ ಬರುತ್ತಿದ್ದು, ಪ್ರಸ್ತುತ ನೆಟ್ ಮೀಟರಿಂಗ್ ವ್ಯವಸ್ಥೆ ಜಾರಿಯಾದ ನಂತರ ಮಾಸಿಕ ವಿದ್ಯುತ್ ವೆಚ್ಚವು ನಿಗಧಿತ ಕನಿಷ್ಠ ಮೊತ್ತ ರೂ.1,000 (ಕಮರ್ಷಿಯಲ್ ಸಂಪರ್ಕ ಆದ್ದರಿಂದ) ಬರುತ್ತಿದ್ದು, ವಿದ್ಯುತ್ ವೆಚ್ಚದಲ್ಲಿ ಇಲಾಖೆಗೆ ಪ್ರತಿ ತಿಂಗಳು ಶೇ. 80 ಕ್ಕಿಂತ ಹೆಚ್ಚು ಹಣ ಉಳಿತಾಯವಾಗುತ್ತಿದೆ. ಕಚೇರಿಯ ಅವಶ್ಯಕತೆ ಅನುಗುಣವಾಗಿ ಬಳಕೆಯಾಗುವ ವಿದ್ಯುತ್ ನಂತರ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ಮತ್ತು ರವಿವಾರ ಅಥವಾ ಸಾರ್ವಜನಿಕ ರಜಾದಿನಗಳಲ್ಲಿ ಕಚೇರಿಯು ಮುಚ್ಚಿರುವಾಗ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ ಅನ್ನು ಸ್ಥಳೀಯ ಗ್ರಿಡ್ಗೆ ಸರಬರಾಜು ಮಾಡಲಾಗುತ್ತದೆ. ಇದಕ್ಕೆ ಹೆಸ್ಕಾಂನಿಂದ ಪ್ರತಿ ಯೂನಿಟ್ಗೆ ರೂ.3.08 ರಂತೆ ಇಲಾಖೆಗೆ ಪಾವತಿಸಲಾಗುತ್ತದೆ.

ಪರಿಸರ ಸಂರಕ್ಷಣೆ ಮತ್ತು ಹಸಿರು ವಲಯದ ವಿಸ್ತರಣೆಯನ್ನೇ ಮುಖ್ಯ ಧ್ಯೇಯವಾಗಿಸಿಕೊಂಡಿರುವ ಸಾಮಾಜಿಕ ಅರಣ್ಯ ವಿಭಾಗದ ಕಚೇರಿಯು ಇದೀಗ ನವೀಕರಿಸಬಹುದಾದ ಇಂಧನ ಬಳಕೆಯಲ್ಲೂ ಇಡೀ ಜಿಲ್ಲೆಗೆ ಮಾದರಿಯಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿನ ಸರ್ಕಾರಿ ಕಚೇರಿಗಳು ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ನ್ನು ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಪಾವತಿಸಬೇಕಾಗಿದ್ದು, ಪ್ರತಿ ವರ್ಷವೂ ಈ ವೆಚ್ಚ ನಿರಂತರವಾಗಿ ಹೆಚ್ಚಾಗುತ್ತಿದೆ. ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲ್ಚಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಚೇರಿಯ ಬಳಕೆಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸಿದಲ್ಲಿ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯದ ಜೊತೆಗೆ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಮಹತ್ತರವಾದ ಕೊಡುಗೆ ನೀಡಬಹುದಾಗಿದೆ ಮತ್ತು ರಾಜ್ಯವನ್ನು ಸಂಪೂರ್ಣ ಇಂಧನ ಸ್ವಾವಲಂಬಿಯನ್ನಾಗಿ ಮಾಡಲು ಸಾಧ್ಯವಾಗಲಿದೆ.
ಜಿಲ್ಲೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಸಂಸದರು ಸರ್ಕಾರಿ ಕಚೇರಿಗಳ ಮೇಲ್ಚಾವಣಿ ಮೇಲೆ ಸೌರಶಕ್ತಿಯ ವಿದ್ಯುತ್ ಉತ್ಪಾದಿಸುವಂತೆ ಕರೆ ನೀಡಿದ್ದು ಅದರಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಮಾರ್ಗದರ್ಶನದಲ್ಲಿ, ಸಾಮಾಜಿಕ ಅರಣ್ಯ ವಿಭಾಗದ ಕಟ್ಟದ ಮೇಲ್ಚಾವಣಿಯಲ್ಲಿ ಸೌರ ವಿದ್ಯುತ್ ಸ್ಥಾವರ ಅಳವಡಿಸಿದ್ದು,ಇದರಿಂದ ಕಚೇರಿಯ ಬಳಕೆಗೆ ಅಗತ್ಯವಿರುವ ಸಂಪೂರ್ಣ ವಿದ್ಯುತ್ ಉಚಿತವಾಗಿ ದೊರೆಯುತ್ತಿದೆ. ಈಗಾಗಲೇ ಹೆಚ್ಚುವರಿಯಾಗಿ ಉತ್ಪಾದನೆಯಾದ 292 ಯೂನಿಟ್ ವಿದ್ಯುತ್ ನ್ನು ಹೆಸ್ಕಾಂ ಗೆ ಮಾರಾಟ ಮಾಡಲಾಗಿದೆ. ಈ ಯೋಜನೆಯು ಕಚೇರಿಯ ವಿದ್ಯುತ್ ಬಿಲ್ ಉಳಿಸುವ ಯೋಜನೆ ಮಾತ್ರವಾಗಿರದೇ ಸರ್ಕಾರಿ ವಲಯದಲ್ಲೂ ಪರಿಸರಸ್ನೇಹಿ ತಂತ್ರಜ್ಞಾನವನ್ನು ಹೇಗೆ ಯಶಸ್ವಿಯಾಗಿ ಬಳಸಬಹುದು ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿನ ಸಾಮಾಜಿಕ ಅರಣ್ಯ ವಿಭಾಗದ 7 ವಲಯ ಕಚೇರಿಗಳಲ್ಲಿ ಕಟ್ಟಡಗಳ ವಿಸ್ತೀರ್ಣವನ್ನು ಆಧರಿಸಿ 2 ಕಿ.ವ್ಯಾ. ಸಾಮರ್ಥ್ಯದ ಸೌರ ಮೇಲ್ಛಾವಣಿಯನ್ನು ಅಳವಡಿಸುವ ಯೋಜನೆಯನ್ನು ಹೊಂದಲಾಗಿದೆ ಎನ್ನುತ್ತಾರೆ ಕಾರವಾರದ ಸಾಮಾಜಿಕ ಅರಣ್ಯ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ.
