ಶಿರಸಿ: ಲೋಕೋಪಯೋಗಿ ಇಲಾಖೆ ಅಳವಡಿಸಿದ್ದ ರಸ್ತೆ ಸೂಚನಾ ಫಲಕಗಳನ್ನು ಕಳವು ಮಾಡಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 18ರಂದು ರಾತ್ರಿ ಸುಮಾರು 10.30ರ ವೇಳೆಗೆ ಅಂದಳ್ಳಿ –ಕಮಟಗೇರಿ –ಕಡವೆ ಬೊಮ್ಮನಳ್ಳಿ ಮೂಲೆಮನೆ ರಸ್ತೆಯಲ್ಲಿ ಅಳವಡಿಸಲಾಗಿದ್ದ ಒಟ್ಟು ₹17,500 ಮೌಲ್ಯದ ಐದು ಕಬ್ಬಿಣದ ರಸ್ತೆ ಸೂಚನಾ ಫಲಕಗಳನ್ನು ಕಳ್ಳರು ಕಿತ್ತು ತಮ್ಮ ಮಾರುತಿ ಓಮ್ನಿ ವ್ಯಾನ್ (ಕೆಎ-05/ಎಂ.ಬಿ-7407)ನಲ್ಲಿ ತುಂಬುತ್ತಿದ್ದರು ಎನ್ನಲಾಗಿದೆ. ಈ ವೇಳೆ ಸಾರ್ವಜನಿಕರು ಸ್ಥಳಕ್ಕೆ ಆಗಮಿಸುತ್ತಿರುವುದನ್ನು ಗಮನಿಸಿದ ಆರೋಪಿಗಳು ವಾಹನ ಸಮೇತ ಅಲ್ಲಿಂದ ಪರಾರಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ಲೋಕೋಪಯೋಗಿ ಇಲಾಖೆಯ ಉಪ ವಿಭಾಗ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅರುಣ್ ಡಿ. ಅವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
