ಕಾರವಾರ: ತಾಲ್ಲೂಕಿನ ಬಿಣಗಾದ ಕಾಮತ್ ಬೀಚ್ ಸಮೀಪ ಅರಬ್ಬಿ ಸಮುದ್ರ ದಂಡೆಯ ಮೇಲೆ ಸುಮಾರು 55 ರಿಂದ 60 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ಮಂಗಳವಾರ ಪತ್ತೆಯಾಗಿದೆ.

ಇಂಡಿಯನ್ ನೇವಲ್ ಬೇಸ್ ವ್ಯಾಪ್ತಿಯ ಕಾಮತ್ ಬೀಚ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಅವದೇಶ್ ಸಿಂಗ್ ಥೋಮರ್ ಅವರು ಸಮುದ್ರ ದಂಡೆಯ ಮೇಲೆ ಶವ ಕಂಡುಬಂದಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಮೇರೆಗೆ ಎಲ್.ಪಿ.ಎಂ. ಇಂಡಿಯನ್ ನೇವಿಯಲ್ಲಿ ಸೇವೆ ಸಲ್ಲಿಸುತ್ತಿರುವ ರಘು ಯಾದವ್ ಅವರು ತಮ್ಮ ಮೇಲಧಿಕಾರಿಗಳಿಗೆ ವಿಷಯ ತಿಳಿಸಿ, ನೇವಲ್ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ರಘು ಯಾದವ್ ಅವರ ದೂರಿನ ಮೇರೆಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಾಗಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆ ಹಾಗೂ ಸಾವಿನ ನಿಖರ ಕಾರಣವನ್ನು ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮೃತನ ಬಗ್ಗೆ ಮಾಹಿತಿ ಇರುವವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.