ಕುಮಟಾ: ದೇಶ-ವಿದೇಶ ಅಥವಾ ಭಾರತದ ಯಾವುದೇ ರಾಜ್ಯದ ವ್ಯಕ್ತಿ ಕರ್ನಾಟಕದಲ್ಲಿ ರಸ್ತೆ ಅಪಘಾತಕ್ಕೆ ಒಳಗಾದರೆ, ಆಸ್ಪತ್ರೆಯಲ್ಲಿ ದಾಖಲಾದ ಮೊದಲ ಏಳು ದಿನಗಳವರೆಗೆ ರೂ.2.5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರುವ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದರು.
ಮಂಗಳವಾರ ಕುಮಟಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಬೆಂಗಳೂರು ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ನಿರ್ಮಿಸಲಾದ ಟ್ರಾಮಾ ಕೇರ್ ಸೆಂಟರ್ ಹಾಗೂ ತುರ್ತು ಚಿಕಿತ್ಸಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಸಾರ್ವಜನಿಕರು ಮುಂದೆ ಬರದಿರುವ ಪ್ರಮುಖ ಕಾರಣ ಚಿಕಿತ್ಸೆ ವೆಚ್ಚದ ಆತಂಕವಾಗಿದೆ. ಈ ಗೊಂದಲ ನಿವಾರಣೆಗಾಗಿ, ಅಪಘಾತಕ್ಕೊಳಗಾದ ವ್ಯಕ್ತಿಗೆ ತಕ್ಷಣ ತುರ್ತು ಚಿಕಿತ್ಸೆ ನೀಡಿ, ಆಸ್ಪತ್ರೆಯಲ್ಲಿ ದಾಖಲಾದ ಮೊದಲ ಏಳು ದಿನಗಳವರೆಗೆ ರೂ.2.5 ಲಕ್ಷದವರೆಗೆ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸುವ ಯೋಜನೆ ಜಾರಿಗೊಳಿಸುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಅಪಘಾತ ಅಥವಾ ತುರ್ತು ಪರಿಸ್ಥಿತಿಯಲ್ಲಿ ಕರೆ ಬಂದ ನಂತರ 15 ನಿಮಿಷಗಳೊಳಗೆ ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪುವ ವ್ಯವಸ್ಥೆ ರೂಪಿಸಲಾಗುತ್ತಿದೆ. ನಿಗದಿತ ಸಮಯದಲ್ಲಿ ಆಂಬ್ಯುಲೆನ್ಸ್ ತಲುಪದಿದ್ದರೆ, ಸಂಬಂಧಿತ ಆಂಬ್ಯುಲೆನ್ಸ್ ಸೇವಾ ಸಂಸ್ಥೆಗೆ ₹3 ಸಾವಿರದಿಂದ ₹5 ಸಾವಿರ ವರೆಗೆ ದಂಡ ವಿಧಿಸುವ ಕಾನೂನು ತರಲಾಗುವುದು ಎಂದು ಖಾದರ್ ಹೇಳಿದರು.
ಶಾಲಾ ಮಕ್ಕಳ ಆರೋಗ್ಯ ಕಾಪಾಡುವ ಉದ್ದೇಶದಿಂದ ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟವನ್ನು ‘ಫುಡ್ ಸೇಫ್ಟಿ ಆಕ್ಟ್’ ಅಡಿಯಲ್ಲಿ ನಿಯಂತ್ರಿಸಲು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುವುದು. ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆಗಾಗಿ ಹೈಟೆಕ್ ಪ್ರಯೋಗಾಲಯಗಳನ್ನು ಸ್ಥಾಪಿಸಿ, ಕಲಬೆರಕೆ ಹಾಗೂ ಕಳಪೆ ಆಹಾರ ಮಾರಾಟ ಮಾಡುವ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿರುವ ವೈದ್ಯರು, ನರ್ಸ್ಗಳು, ಫಾರ್ಮಾಸಿಸ್ಟ್ಗಳು ಹಾಗೂ ಲ್ಯಾಬ್ ಟೆಕ್ನಿಷಿಯನ್ಗಳ ಖಾಲಿ ಹುದ್ದೆಗಳನ್ನು ಗುತ್ತಿಗೆ ಹಾಗೂ ಖಾಯಂ ಆಧಾರದ ಮೇಲೆ ಶೀಘ್ರ ಭರ್ತಿ ಮಾಡಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಕುಮಟಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರಂಭವಾಗಿರುವ ಟ್ರಾಮಾ ಕೇರ್ ಸೆಂಟರ್ ರಾಜ್ಯ ಆರೋಗ್ಯ ಇಲಾಖೆಯ ಮೂರನೇ ಟ್ರಾಮಾ ಕೇರ್ ಕೇಂದ್ರವಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವುದರಿಂದ ಅಪಘಾತ ಸಂತ್ರಸ್ತರಿಗೆ ತ್ವರಿತ ಚಿಕಿತ್ಸೆ ದೊರಕಲು ಸಹಕಾರಿಯಾಗಲಿದೆ ಎಂದ ಅವರು, ಅಗತ್ಯ ವೈದ್ಯಕೀಯ ಉಪಕರಣಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಶೀಘ್ರವೇ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು. ಅಲ್ಲದೆ, ಮಂಗಳೂರಿನ ಎ.ಜೆ. ಆಸ್ಪತ್ರೆ ಹಾಗೂ ಶ್ರೀನಿವಾಸ ಆಸ್ಪತ್ರೆಗಳು ಈ ಟ್ರಾಮಾ ಕೇರ್ ಕೇಂದ್ರವನ್ನು ದತ್ತು ಪಡೆದು ತಾಂತ್ರಿಕ ಹಾಗೂ ವೈದ್ಯಕೀಯ ಸಹಕಾರ ನೀಡುವಂತೆ ಮನವಿ ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
