ಟಿ-20 ವರ್ಲ್ಡ್ ಕಪ್‌ನ ಫೈನಲ್ ಮ್ಯಾಚ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳ ಅಂತರದಿಂದ ಸೋಲಿಸಿದ ಭಾರತ ಮತ್ತೆ ಮೂರನೇ ಬಾರಿ ವರ್ಲ್ಡ್ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ಭಾರತ ತಂಡ ತನ್ನ ಗೆಲುವಿನ ಬಾವುಟ ಹಾರಿಸುತ್ತಿದ್ದಂತೇ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿದ್ದ ಭಾರತೀಯರು ಮಾತ್ರವಲ್ಲದೇ, ಟಿವಿ, ಮೊಬೈಲ್ ಮೂಲಕ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದ ಇಡೀ ದೇಶದ ಜನರು ಕುಣಿದು ಕುಪ್ಪಳಿಸಿ, ಪಟಾಕಿ ಒಡೆದು, ಸಿಹಿ ತಿನ್ನಿಸಿ ಸಂಭ್ರಮಿಸಿದರು.

2007ರಲ್ಲಿ ಮಹೇಂದ್ರ ಸಿಂಗ್ ಧೋನಿ, 2024ರಲ್ಲಿ ರೋಹಿತ್ ಶರ್ಮಾ ತಂಡದ ನಂತರ 2026ರಲ್ಲಿ ನಾಯಕ ಸೂರ್ಯಕುಮಾರ್ ತಂಡ ಬರೋಬ್ಬರಿ 5 ವಿಕೆಟ್‌ಗೆ 255ರನ್ ಗಳಿಸುವ ಮೂಲಕ ಈ ಬಾರಿ ಟಿ-20 ವರ್ಲ್ಡ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಭಾರತ ತಂಡದಿಂದ‌ ಓಪನಿಂಗ್ ಬ್ಯಾಟ್ಸ್‌ಮ್ಯಾನ್‌ಗಳಾಗಿ ಬಂದ ಸಂಜುಸ್ಯಾಮ್ಸನ್ 46 ಬಾಲ್‌ಗೆ 89 ರನ್ ಹಾಗೂ ಅಭೀಷೇಕ್ ಶರ್ಮಾ 21 ಬಾಲ್‌ಗೆ 52 ರನ್ ಗಳಿಸಿ ಭರ್ಜರಿ ಓಪನಿಂಗ್ ಮಾಡಿದ್ದರು. ಬಳಿಕ ಇಶಾನ್ ಕಿಶನ್ 25 ಬಾಲ್‌ಗೆ 54, ಹಾರ್ದಿಕ್ ಪಾಂಡ್ಯ 13 ಬಾಲ್‌ಗೆ 18 , ಶಿವಮ್ ದುಬೆ 8 ಬಾಲ್‌ಗೆ 26 ರನ್ ಹಾಗೂ ತಿಲಕ್ ವರ್ಮಾ 6 ಬಾಲ್‌ಗೆ 8 ರನ್ ಗಳಿಸಿದರೆ, ನಾಯಕ ಸೂರ್ಯ ಕುಮಾರ್ ಮಾತ್ರ ಫ್ಲಿಕ್ ಶಾಟ್‌ಗೆ ಬ್ಯಾಟ್ ಬೀಸಿ ಕ್ಯಾಚ್ ಔಟ್ ಆಗೋ ಮೂಲಕ 0 ರನ್ ಮಾಡಿ ಪೆವಿಲಿಯನ್‌ಗೆ ತೆರಳಿದ್ದರು.‌ ನ್ಯೂಜಿಲೆಂಡ್ ತಂಡದ ಬೌಲರ್ ಜೇಮ್ಸ್ ನೀಶಾಮ್ 3 ವಿಕೆಟ್ ಪಡೆದರೆ, ರಚಿನ್ ರವೀಂದ್ರ ಹಾಗೂ ಮ್ಯಾಟ್ ಹೆನ್ರಿ ತಲಾ 1 ವಿಕೆಟ್ ಪಡೆದರು.

ನ್ಯೂಜಿಲೆಂಡ್ ಮುಂದೆ ಗೆಲ್ಲಲು 256 ರನ್ ಟಾರ್ಗೆಟ್ ನೀಡಿದ ಬಳಿಕ ಕಿವೀಸ್ ತಂಡವನ್ನು ಕಟ್ಟಿ ಹಾಕಲು ಸಿದ್ಧರಾದ ಭಾರತದ ಬೌಲರ್ಸ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಮೊದಲ ಓವರ್‌ನಲ್ಲೇ ಅರ್ಶದೀಪ್ ಎಸೆದ ಬೌಲಿಂಗ್‌ಗೆ ಶಿವಮ್ ದುಬೆ ಕ್ಯಾಚ್ ಬಿಟ್ರೆ, ಬಳಿಕ ಹಾರ್ದಿಕ್ ಪಾಂಡ್ಯ 1, ಅಕ್ಸರ್ ಪಟೇಲ್ 3, ಜಸ್‌ಪ್ರೀತ್ ಬುರ್ಮಾ 4 ಹಾಗೂ ವರುಣ್ ಚಕ್ರವರ್ತಿ 1 ಹಾಗೂ ಅಭಿಷೇಕ್ 1 ವಿಕೆಟ್ ಪಡೆದುಕೊಂಡರು. ಸಿಕ್ಸ್‌ ಲೈನ್‌ನಲ್ಲಿ ಇದ್ದುಕೊಂಡು ಇಶಾನ್ ಕಿಶನ್ ಹಿಡಿದ 3 ಕ್ಯಾಚ್ ಅಂತೂ ಅದ್ಭುತವಾಗಿತ್ತು.

ನ್ಯೂಜಿಲೆಂಡ್ ತಂಡದ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾದ ಟಿಮ್ ಸೈಫರ್ಟ್ 26 ಬಾಲ್‌ಗೆ 52 ರನ್ ಗಳಿಸಿದ್ರೆ, ಫಿನ್ ಆಲೆನ್ 7 ಬಾಲ್‌ಗೆ 9 ರನ್ ಗಳಿಸಿದ್ದರು. ಬಳಿಕ ರಚಿನ್ ರವೀಂದ್ರ 2 ಬಾಲ್ ಗೆ 1ರನ್, ಗ್ಲೆನ್ ಫಿಲಿಪ್ 5 ಬಾಲ್‌ಗೆ 5 ರನ್, ಮಾರ್ಕ್ ಚಾಪ್‌ಮನ್ 8 ಬಾಲ್‌ಗೆ 3 ರನ್, ಡೇರಿಲ್ ಮಿಚೆಲ್ 11 ಬಾಲ್‌ಗೆ 17 ರನ್, ಜೇಮ್ಸ್ ನೀಶಾಮ್ 7 ಬಾಲ್‌ಗೆ 8 ರನ್, ಮ್ಯಾಟ್ ಹೆನ್ರಿ 1 ಬಾಲ್‌ಗೆ 0 ರನ್‌‌, ನಾಯಕ ಮಿಚೆಲ್ ಸ್ಯಾಂಟ್ನೆರ್ 35 ಬಾಲ್‌ಗೆ 43 ರನ್, ಜೇಕಬ್ ಢಫಿ 5 ಬಾಲ್‌ಗೆ 3 ರನ್ ಗಳಿಸಿ ಔಟಾದರೆ, ಲೋಕಿ ಫರ್ಗ್ಸನ್ 7 ಬಾಲ್‌ಗೆ 6 ರನ್ ಗಳಿಸುವ ಮೂಲಕ ನಾಟ್‌ಔಟ್ ಆದರು. ಭಾರತದ ಮುಂದೆ ಕೇವಲ 159 ರನ್ ಗಳಿಸಿ ಎಲ್ಲಾ ವಿಕೆಟ್ ಕಳೆದುಕೊಳ್ಳುವ ಮೂಲಕ ನ್ಯೂಜಿಲೆಂಡ್‌ ರಣಾಗತಿಯಾಯಿತು.