ಹೊನ್ನಾವರ: ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಡೊಂಕದಲ್ಲಿರುವ ಮೀನುಗಾರಿಕೆ ಬಂದರಿನಲ್ಲಿ ಲಂಗರು ಹಾಕಿ ನಿಲ್ಲಿಸಲಾಗಿದ್ದ ಪರ್ಷಿಯನ್ ಬೋಟ್‌ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ಆಯುಬ್ ಸಾಬ್ ಅವರಿಗೆ ಸೇರಿದ ಪರ್ಷಿಯನ್ ಬೋಟ್ ಬಂದರಿನಲ್ಲಿ ನಿಂತಿದ್ದ ವೇಳೆ, ಏಕಾಏಕಿ ಬೋಟ್‌ನೊಳಗಿನಿಂದ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವೇಗವಾಗಿ ವ್ಯಾಪಿಸಿ ಇಡೀ ಬೋಟ್ ಅನ್ನು ಆವರಿಸಿತು. ಘಟನೆಯನ್ನು ಗಮನಿಸಿದ ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ತಕ್ಷಣವೇ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದಾಗ್ಯೂ, ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಬೋಟ್ ನ್ನು ರಕ್ಷಿಸಲು ಸಾಧ್ಯವಾಗದೆ ಅದು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಅಗ್ನಿ ಅವಘಡದಲ್ಲಿ ಬೋಟ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಾರಿಕಾ ಬಲೆಗಳು, ಶಕ್ತಿಶಾಲಿ ಇಂಜಿನ್‌ಗಳು ಸೇರಿದಂತೆ ಇತರೆ ಉಪಕರಣಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಘಟನೆಯಿಂದ ಸುಮಾರು ₹30 ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿ ನಷ್ಟ ಸಂಭವಿಸಿದೆ ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ.
ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಇತರ ತಾಂತ್ರಿಕ ದೋಷದಿಂದ ಬೆಂಕಿ ಹೊತ್ತಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಘಟನೆಯ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗ್ನಿ ಅವಘಡದ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸದಿರುವುದು ಸಮಾಧಾನದ ಸಂಗತಿಯಾಗಿದೆ.
