Karwar| ತಾಲೂಕಿನ ಹಣಕೋಣ ಸಮೀಪದ ಕಾಳಿ ನದಿಯಲ್ಲಿ ಬುಧವಾರ ಕಣ್ಮರೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಗುರುವಾರ ಪತ್ತೆಯಾಗಿದೆ.
ಮೃತರನ್ನು ಹೊಡ್ಲೇಬಾಗ-ಮುಡಗೇರಿ ಮೂಲದ ಹಾಗೂ ಪ್ರಸ್ತುತ ಕಾರವಾರದಲ್ಲಿ ವಾಸವಾಗಿದ್ದ ಸತೀಶ್ ಮಾಳ್ಸೇಕರ್ ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಸತೀಶ್ ಅವರು ಬುಧವಾರ ಹಣಕೋಣದಲ್ಲಿರುವ ಮುಚ್ಚಿರುವ ‘ರಿವರ್ ಎಡ್ಜ್ ಪ್ಯಾರಡೈಸ್ ರೆಸಾರ್ಟ್’ ಸಮೀಪದಿಂದ ಕಾಳಿ ನದಿಗೆ ಇಳಿದಿದ್ದರು ಎನ್ನಲಾಗಿದ್ದು, ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ಮಾಹಿತಿ ದೊರೆತ ತಕ್ಷಣ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಶೋಧ ಕಾರ್ಯಾಚರಣೆ ನಡೆಸಿದ್ದರು.
ಗುರುವಾರ ಶೋಧ ಕಾರ್ಯಾಚರಣೆ ವೇಳೆ ನದಿಯಲ್ಲಿ ಸತೀಶ್ ಅವರ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸತೀಶ್ ಅವರು ಸುಮಾರು ಎಂಟು ವರ್ಷಗಳ ಹಿಂದೆ ಇದೇ ಭಾಗದ ರೆಸಾರ್ಟ್‌ವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು ಎನ್ನಲಾಗಿದೆ. ಅವರಿಗೆ ಸಾಲಬಾಧೆ ಇತ್ತು ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
