ಉಡುಪಿ: ಅಧಿಕಾರಿಗಳ ಸೋಗಿನಲ್ಲಿ ವಾಟ್ಸಪ್ ಕಾಲ್ ಮೂಲಕ ಬ್ರಹ್ಮಾವರದ ವೃದ್ಧೆ ಮಹಿಳೆಯನ್ನು ಡಿಜಿಟಲ್ ಅರೆಸ್ಟ್ ನಡೆಸಿದ ದುಷ್ಕರ್ಮಿಗಳು, ಬಳಿಕ ಪರಿಶೀಲನೆ ಹೆಸರಿನಲ್ಲಿ ಬರೋಬ್ಬರಿ 65 ಲಕ್ಷ ರೂ. ವಸೂಲಿ ಮಾಡಿ ಪಂಗನಾಮ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಬ್ರಹ್ಮಾವರದ ಶೀಲಾ (66) ಎಂಬವರೇ ಬೃಹತ್ ಮೊತ್ತ ಕಳೆದುಕೊಂಡ ವೃದ್ಧೆ. ಜು.13ರಂದು ಬೆಳಿಗ್ಗೆ 10ಕ್ಕೆ ಶೀಲಾ ಅವರ ಮೊಬೈಲ್ ಗೆ ಮುಂಬೈ ಪೊಲೀಸ್ ಡಿಪಾರ್ಟಮೆಂಟ್ ಎಂದು ವಾಟ್ಸಪ್ ಮೆಸೇಜ್ ಬಂದಿತ್ತು. ಆನಂತರ ಅದೇ ನಂಬರ್ನಿಂದ ವಿಡಿಯೋ ಕಾಲ್ ಮಾಡಿದ ಆರೋಪಿ ತನ್ನನ್ನು ಪೊಲೀಸ್ ಅಧಿಕಾರಿ ಧಿರಿಸಿನಲ್ಲಿ ತೋರಿಸಿಕೊಂಡು ತಾನು ಮಂಬಯಿ ಕೊಲಬಾ ಪೊಲೀಸ್ ಇನ್ಸ್ಪೆಕ್ಟರ್ ಎಂದು ಹೇಳಿದ್ದ. ಬಳಿಕ ನೀವು ಮನೆಯಲ್ಲಿ ಯಾರೆಲ್ಲ ಇದ್ದೀರಿ ಎಂದು ಆತ ಕೇಳಿದ್ದಾಗ ಶೀಲ ಅವರು ತಾನು ಒಬ್ಬಳೇ ಇರುವುದಾಗಿ ತಿಳಿಸಿದ್ದರು.
ಇದನ್ನೇ ದಾಳವಾಗಿ ಉಪಯೋಗಿಸಿಕೊಂಡ ಆತ, ನೀವು ಹೆದರುವುದು ಬೇಡ, ನಿಮ್ಮಲ್ಲಿ ವಿಚಾರವೊಂದನ್ನು ಹೇಳುತ್ತೇನೆ. ನಿಮ್ಮ ಕೆನರಾ ಬ್ಯಾಂಕ್ ಖಾತೆಗೆ 20 ಕೋಟಿ ರೂ. ಹಣ ಜಮಾ ಆಗಿದ್ದು, ಈ ಹಣದ ಬಗ್ಗೆ ಪ್ರಕರಣ ದಾಖಲಾಗಿ ನಿಮ್ಮ ಮೇಲೆ ವಾರೆಂಟ್ ಆಗಿದೆ. ಮಂಗಳೂರು ಪೊಲೀಸರು ನಿಮ್ಮನ್ನು ಬಂಧಿಸುವುದಾಗಿ ಹೆದರಿಸಿದ್ದ. ಅಲ್ಲದೇ, ಶೀಲಾ ಅವರ ಬ್ಯಾಂಕ್ ಖಾತೆ ಎಲ್ಲೆಲ್ಲಿದೆ ಎಂದು ವಿಚಾರಿಸಿ ಬ್ಯಾಂಕುಗಳ ವಿವರಗಳ ಫೋಟೋವನ್ನು ಬಲವಂತವಾಗಿ ತೆಗೆಸಿಕೊಂಡಿದ್ದ. ಈ ಪ್ರಕರಣದಿಂದ ಹೊರಗೆ ಬರಬೇಕೆಂದರೆ ನಿಮ್ಮ ಖಾತೆಯಲ್ಲಿರುವ ಹಣದ ನೋಟುಗಳ ಸೀರಿಯಲ್ ನಂಬರ್ ಗಳನ್ನು ಪರಿಶೀಲಿಸಬೇಕಿದ್ದು, ಈ ಹಿನ್ನೆಲೆ ನಾವು ಹೇಳಿದ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡುವಂತೆ ತಿಳಿಸಿದ್ದ.
ಬಳಿಕ ಜು.13ರಿಂದ ಜು.17ರವರೆಗೆ ದುಷ್ಕರ್ಮಿ ಪದೇಪದೇ ವಾಟ್ಸಪ್ ಕರೆಗಳನ್ನು ಮಾಡಿ ಪರಿಶೀಲನೆ ಹೆಸರಿನಲ್ಲಿ ಶೀಲಾ ಅವರ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು 65 ಲಕ್ಷ ರೂ. ಹಣವನ್ನು ಆರೋಪಿಗಳು ತಾವು ಹೇಳಿದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಘಟನೆ ಬಳಿಕ ತಾವು ಮೋಸ ಹೋಗಿರುವ ಬಗ್ಗೆ ತಿಳಿದುಬಂದಿದ್ದು, ಘಟನೆ ಸಂಬಂಧಿಸಿ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರಿಂದ ತನಿಖೆ ಮುಂದುವರಿದಿದೆ.
ಮಹಿಳೆಯ 15 ಲಕ್ಷ ರೂ. ಉಳಿಸಿದ ಬ್ರಹ್ಮಾವರ ಪಿಎಸ್ಐ: ಆಸ್ತಿ ಮಾರಾಟ ಮಾಡಿದ್ದ ಹಣವನ್ನು ಬ್ಯಾಂಕ್ನಲ್ಲಿರಿಸಿದ್ದ ಬ್ರಹ್ಮಾವರದ ಶೀಲಾ ಎಂಬವರ ಖಾತೆಯಿಂದ ಸಂಶಯಾಸ್ಮದ ಖಾತೆಗಳಿಗೆ ಹಣ ವರ್ಗಾವಣೆಯಾಗುತ್ತಿದ್ದ ಬಗ್ಗೆ ದೆಹಲಿಯ ಅಧಿಕಾರಿಗಳು ಜು.17ರಂದು ಬ್ರಹ್ಮಾವರ ಪಿಎಸ್ಐ ಅಶೋಕ್ ಮಳಬಗಿ ಅವರಿಗೆ ಕರೆ ಮಾಡಿ ಮಹಿಳೆಯ ಹೆಸರು ಹಾಗೂ ಫೋನ್ ನಂಬರ್ ನೀಡಿದ್ದರು. ಪಿಎಸ್ಐ ಅಶೋಕ್ ಅವರು ಮಹಿಳೆಗೆ ಕರೆ ಮಾಡುತ್ತಿದ್ದ ಸಂದರ್ಭದಲ್ಲಿ ಇನ್ನೊಂದೆಡೆಯಿಂದ ಶೀಲಾ ಅವರನ್ನು ಹೆದರಿಸಿ ಕೂರಿಸಿದ್ದ ನಕಲಿ ಅಧಿಕಾರಿಗಳು, ಯಾವುದೇ ಕರೆ ಸ್ವೀಕರಿಸಬಾರದು ಎಂದು ಸೂಚನೆ ನೀಡಿದ್ದರು.
ಈ ವೇಳೆ ಶೀಲಾ ಅವರಿಗೆ ಬರುತ್ತಿದ್ದ ಕರೆಯ ಸಂಖ್ಯೆಯನ್ನು ನಕಲಿ ಅಧಿಕಾರಿಗಳು ಪಡೆದು ಪಿಎಸ್ಐ ಅಶೋಕ್ ಅವರಿಗೆ ಕರೆ ಮಾಡಿ ನೀನ್ಯಾರು ? ಶೀಲಾ ಅವರಿಗೆ ಏನಕ್ಕೆ ಕರೆ ಮಾಡುತ್ತಿರುವೆ ? ಎಂದು ವಿಚಾರಿಸಿದ್ದರು. ಆಕೆ ಪಿಎಸ್ಐ ಕೂಡಾ ನೀನ್ಯಾರು ? ಎಲ್ಲಿಂದ ಕರೆ ಮಾಡುತ್ತಿದ್ದೀಯ ಎಂದು ಪ್ರಶ್ನೆ ಮಾಡತೊಡಗಿದ್ದರು. ಕರೆ ಕಟ್ ಮಾಡಿದ್ದ ನಕಲಿ ಅಧಿಕಾರಿಗಳು ಮತ್ತೆ 3-4 ಬೇರೆ ಬೇರೆ ಸಂಖ್ಯೆಯಿಂದ ಕರೆ ಮಾಡಿ ಪಿಎಸ್ಐ ಅವರನ್ನು ಮತ್ತೆ ಮತ್ತೆ ಪ್ರಶ್ನಿಸತೊಡಗಿದ್ದರು. ಇದರಿಂದ ಸಂಶಯಗೊಂಡ ಪಿಎಸ್ಐ ಅಶೋಕ್ , ಶೀಲಾ ಅವರ ನಂಬರ್ ಮೂಲಕ ಅವರ ವಿಳಾಸ ಸಂಗ್ರಹಿಸಿ ಕೂಡಲೇ ಅವರ ಮನೆಯತ್ತ ಧಾವಿಸಿದ್ದರು.
ಪೊಲೀಸರು ಮನೆ ಪ್ರವೇಶ ಮಾಡುತ್ತಿದ್ದಂತೇ ಆರೋಪಿಗಳು ಕರೆ ಕಟ್ ಮಾಡಿ ಎಸ್ಕೇಪ್ ಆಗಿದ್ದರು. ಜು.15 ಹಾಗೂ ಜು.16ರಂದು ಅದಾಗಲೇ ಆಸ್ತಿ ಮಾರಾಟ ಮಾಡಿದ್ದ ಹಣ 50 ಲಕ್ಷ ರೂ., ಅವರ ಪತಿ ಅಂಚೆ ಇಲಾಖೆಯಲ್ಲಿ ಕೂಡಿಟ್ಟಿದ್ದ ಹಣ 15 ಲಕ್ಷ ರೂ. ಸೇರಿದಂತೆ 65 ಲಕ್ಷ ರೂ. ವರ್ಗಾವಣೆ ಮಾಡಿದ್ದ ಶೀಲಾ ಅವರು ನಕಲಿ ಅಧಿಕಾರಿಗಳ ಒತ್ತಾಯದ ಮೇಲೆ ಮತ್ತೆ ಖಾಸಗಿ ಫೈನಾನ್ಸ್ನಲ್ಲಿ ಚಿನ್ನದ ಒಡವೆಗಳನ್ನು ಅಡವಿಟ್ಟು ತಂದಿದ್ದ 15 ಲಕ್ಷ ರೂ. ವರ್ಗಾವಣೆ ಮಾಡಲು ಸಿದ್ಧರಾಗಿದ್ದರು. ಆದರೆ, ಪಿಎಸ್ಐ ಅಶೋಕ್ ಅವರ ಪ್ರವೇಶದಿಂದ ಈ 15 ಲಕ್ಷ ರೂ. ಕಳ್ಳರ ಪಾಲಾಗುವುದು ತಪ್ಪಿದಂತಾಗಿದೆ.
