ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಹಿನ್ನೆಲೆಯಲ್ಲಿ ಮಳೆಯ ಕೊರತೆ ತೀವ್ರಗೊಂಡಿದೆ.

 ಜೂನ್ 1ರಿಂದ ಜುಲೈ 15ರವರೆಗೆ ಜಿಲ್ಲೆಯಾದ್ಯಂತ ವಾಡಿಕೆಗಿಂತ ಶೇ.25ರಷ್ಟು ಕಡಿಮೆ ಮಳೆಯಾಗಿದೆ.
ಈ ಅವಧಿಯಲ್ಲಿ ಸಾಮಾನ್ಯವಾಗಿ 1,265 ಮಿ.ಮೀ. ಮಳೆಯಾಗಬೇಕಿದ್ದರೆ, ಕೇವಲ 945.4 ಮಿ.ಮೀ. ಮಳೆಯಷ್ಟೇ ದಾಖಲಾಗಿದ್ದು, ಜಿಲ್ಲೆಯ ಕೃಷಿ ಚಟುವಟಿಕೆಗಳು ಹಾಗೂ ಜಲಮೂಲಗಳ ಮೇಲೆ ಇದರ ಪರಿಣಾಮ ಬೀಳುವ ಆತಂಕ ವ್ಯಕ್ತವಾಗಿದೆ.

 ತಾಲೂಕುವಾರು ಅಂಕಿಅಂಶಗಳ ಪ್ರಕಾರ, ಯಲ್ಲಾಪುರದಲ್ಲಿ ಅತಿ ಹೆಚ್ಚು ಶೇ.38ರಷ್ಟು ಮಳೆಯ ಕೊರತೆ ದಾಖಲಾಗಿದೆ. ಬಳಿಕ ಭಟ್ಕಳದಲ್ಲಿ ಶೇ.37, ಅಂಕೋಲ ಮತ್ತು ಹಳಿಯಾಳದಲ್ಲಿ ತಲಾ ಶೇ.31, ಮುಂಡಗೋಡದಲ್ಲಿ ಶೇ.23, ಕುಮಟಾದಲ್ಲಿ ಶೇ.21, ಕಾರವಾರದಲ್ಲಿ ಶೇ.20, ಹೊನ್ನಾವರದಲ್ಲಿ ಶೇ.19, ದಾಂಡೇಲಿ ಹಾಗೂ ಸಿದ್ದಾಪುರದಲ್ಲಿ ತಲಾ ಶೇ.12, ಸೂಪಾದಲ್ಲಿ ಶೇ.11 ಹಾಗೂ ಶಿರಸಿಯಲ್ಲಿ ಶೇ.8ರಷ್ಟು ಮಳೆಯ ಕೊರತೆ ಕಂಡುಬಂದಿದೆ.

 ಇನ್ನು ಕಳೆದ ಒಂದು ವಾರದ ಅಂಕಿಅಂಶಗಳು ಮತ್ತಷ್ಟು ಆತಂಕಕಾರಿ ಚಿತ್ರಣ ನೀಡಿವೆ. ಈ ಅವಧಿಯಲ್ಲಿ ವಾಡಿಕೆಯಂತೆ 217.5 ಮಿ.ಮೀ. ಮಳೆಯಾಗಬೇಕಿದ್ದರೆ, ಕೇವಲ 38.4 ಮಿ.ಮೀ. ಮಳೆಯಷ್ಟೇ ಸುರಿದಿದ್ದು, ಶೇ.82ರಷ್ಟು ಮಳೆಯ ಕೊರತೆ ದಾಖಲಾಗಿದೆ. ಮಳೆ ಕೊರತೆಯು ಮುಂದುವರಿದರೆ ಕೃಷಿ, ಕುಡಿಯುವ ನೀರಿನ ಮೂಲಗಳು ಹಾಗೂ ಜಲಾಶಯಗಳ ನೀರಿನ ಸಂಗ್ರಹದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.