Karwar| `ಯುವ ಮನಸ್ಸುಗಳಿಗೆ ಪ್ರೇರಣೆ – ಭವಿಷ್ಯದ ಸೈನಿಕ ನಾಯಕರಿಗೆ ದಾರಿದೀಪ’ (Igniting Young Minds, Inspiring Future Military Leaders) ಎಂಬ ಆಶಯದೊಂದಿಗೆ ಉಡುಪಿ ಜಿಲ್ಲೆಯ 6 KAR Naval Unit NCC ಘಟಕದ 16 ಎನ್‌ಸಿಸಿ ಕೆಡೆಟ್‌ಗಳು ಹಾಗೂ ಅಂಕೋಲಾದ ಜೆಸಿ ಇಂಗ್ಲೀಷ್ ಮಿಡಿಯಂ ಶಾಲೆಯ 69 ವಿದ್ಯಾರ್ಥಿಗಳು ಮತ್ತು ಎನ್‌ಸಿಸಿ ಕೆಡೆಟ್ ಗಳು ಐ.ಎನ್.ಎಸ್ ಕದಂಬ ನೌಕಾ ನೆಲೆಗೆ ಶೈಕ್ಷಣಿಕ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಾರತೀಯ ನೌಕಾಪಡೆಯ ವೈಭವವನ್ನು ನೇರವಾಗಿ ಅನುಭವಿಸುವ ಅವಕಾಶ ಪಡೆದುಕೊಂಡರು. ವಿಶೇಷವಾಗಿ, ಭಾರತದ ಪ್ರಮುಖ ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್ ವಿಕ್ರಮಾದಿತ್ಯ (Aircraft carrier INS Vikramaditya)ನ್ನು ಸಮೀಪದಿಂದ ವೀಕ್ಷಿಸಿ ಅದರ ಕಾರ್ಯವಿಧಾನಗಳ ಬಗ್ಗೆ ತಿಳಿದುಕೊಂಡರು.

ನೌಕಾಪಡೆಯ ಅಧಿಕಾರಿಗಳು ಕೆಡೆಟ್ ಗಳಿಗೆ ಏರ್ ಕ್ರಾಫ್ಟ್ ಕ್ಯಾರಿಯರ್ ಆಧಾರಿತ ವಿಮಾನ ಹಾರಾಟ ಕಾರ್ಯಾಚರಣೆಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಜೊತೆಗೆ ಸಣ್ಣ ಶಸ್ತ್ರಾಸ್ತ್ರಗಳ ಬಳಕೆ, ನಿರ್ವಹಣೆ ಮತ್ತು ಆಧುನಿಕ ಎನ್‌ಬಿಸಿಡಿ (NBCD – Nuclear, Biological, Chemical Damage Control) ಸಾಧನಗಳ ಕಾರ್ಯಪದ್ಧತಿ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಈ ಭೇಟಿ ವಿದ್ಯಾರ್ಥಿಗಳಲ್ಲಿ ದೇಶಸೇವೆಯ ಸ್ಪೂರ್ತಿ ಮೂಡಿಸುವುದರ ಜೊತೆಗೆ ಸೈನ್ಯ ಜೀವನದ ಶಿಸ್ತು, ತಾಂತ್ರಿಕ ಜ್ಞಾನ ಹಾಗೂ ನಾಯಕತ್ವ ಗುಣಗಳ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಲಿದೆ. ಎನ್‌ಸಿಸಿ ಕೆಡೆಟ್ ಗಳು ದೇಶದ ಅತೀ ದೊಡ್ಡ ಏರ್ ಕ್ರಾಫ್ಟ್ ಕ್ಯಾರಿಯರ್ ಐಎನ್‌ಎಸ್ ವಿಕ್ರಮಾದಿತ್ಯದ ಹತ್ತಿರದ ಅನುಭವವನ್ನು ತಮ್ಮ ಭವಿಷ್ಯದ ವೃತ್ತಿ ಜೀವನಕ್ಕೆ ಮಾರ್ಗದರ್ಶಕವಾಗಿ ಪರಿಗಣಿಸಲಿ ಎಂಬುದು ಭಾರತೀಯ ನೌಕಾದಳದ ಆಶಯ.
