ಕಾರವಾರ: ರಾಜ್ಯದ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ದಿನನಿತ್ಯ ಆರ್‌ಎಸ್‌ಎಸ್ ಕುರಿತು ಜಪ ಮಾಡುವ ಬದಲು, ಕಲಬುರಗಿಯ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆ ಸುಧಾರಣೆಯ ಬಗ್ಗೆ ಕಲ್ಲಡ್ಕದ ಪ್ರಭಾಕರ ಭಟ್ ಅವರ ಬಳಿ ಒಂದು ವಾರ ಶಿಕ್ಷಣ ಪಡೆದುಕೊಳ್ಳಲಿ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಸಲಹೆ ನೀಡಿದರು.

ಕಾರವಾರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ ಖರ್ಗೆ ಅವರು ಕಲಬುರಗಿ ಜಿಲ್ಲೆಯ ಶೈಕ್ಷಣಿಕ ಫಲಿತಾಂಶದ ಬಗ್ಗೆ ಚರ್ಚೆ ಮಾಡಬೇಕಿತ್ತು. ಆದರೆ ಅದನ್ನು ಬಿಟ್ಟು ಆರ್‌ಎಸ್‌ಎಸ್ ಬಗ್ಗೆ ನಿರಂತರವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಲ್ಲಡ್ಕ ಪ್ರಭಾಕರ ಭಟ್ ಅವರ ಶಿಕ್ಷಣ ಮಾದರಿಯಿಂದ ಪಾಠ ಕಲಿತರೆ, ಗೃಹ ಸಚಿವರ ಜಿಲ್ಲೆಯ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ದೊರೆಯಲು ಸಹಕಾರಿಯಾಗಬಹುದು. ಉಡುಪಿ ಜಿಲ್ಲೆಯಂತೆ ಕಲಬುರಗಿಯೂ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಿಯಾಂಕ ಖರ್ಗೆ ಅವರು ತಮ್ಮ ಜಿಲ್ಲೆಯ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಸ್ಥಿತಿಗತಿಗಳನ್ನು ಅರಿತು ಮಾತನಾಡುವುದು ಸೂಕ್ತ ಎಂದು ಯಶಪಾಲ್ ಸುವರ್ಣ ಅಭಿಪ್ರಾಯಪಟ್ಟರು.