ಕಾರವಾರ: ಹೊನ್ನಾವರ ತಾಲೂಕಿನ ಹಳದಿಪುರದ ಕೃಷ್ಣಾಶ್ರಮ ಮಠದಲ್ಲಿ ನಡೆದ ಸಭೆಯ ವೇಳೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ ದಾಖಲಾಗಿದೆ.
ಕಾರವಾರದ ಸದಾಶಿವಗಡ ನಿವಾಸಿ, ಅಜೀತ್ ರಾಮ ಪೋಕಳೆ (60) ನೀಡಿದ ದೂರಿನ ಮೇರೆಗೆ, 8 ರಿಂದ 10 ಮಂದಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS-2023)ಯ ಕಲಂ 126(2), 115(2), 351(2), 189(2), 191(2) ಸಹಿತ 190ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಜುಲೈ 5ರಂದು ಬೆಳಿಗ್ಗೆ ಹೊನ್ನಾವರದ ಹಳದಿಪುರದಲ್ಲಿರುವ ಕೃಷ್ಣಾಶ್ರಮ ಮಠದಲ್ಲಿ ಮಠದ ಆಡಳಿತ ಮತ್ತು ಸ್ವಾಮೀಜಿಗಳ ಕುರಿತ ವಿಚಾರವಾಗಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಭಾಷಣಕಾರರಾಗಿದ್ದ ಮಿಥುನ್ ಚಕ್ರವರ್ತಿ ಸುಲಿಬೇಲೆ, ವಾಮನಾಶ್ರಮ ಸ್ವಾಮಿಗಳನ್ನು ಪುನಃ ಮಠಕ್ಕೆ ಕರೆಯಿಸುವ ಬಗ್ಗೆ ಮಾತನಾಡುತ್ತಿದ್ದಾಗ, ಅಜೀತ್ ಪೊಕಳೆ ಮಧ್ಯಪ್ರವೇಶಿಸಿ, ಮಠದ ಆಸ್ತಿ ಹಾಗೂ ಹಣದ ದುರ್ಬಳಕೆ ಮತ್ತು ಮಹಿಳೆಯರಿಗೆ ಕಿರುಕುಳ ನೀಡಲಾಗಿದೆ ಎನ್ನಲಾದ ಆರೋಪಗಳ ಬಗ್ಗೆ ಇದುವರೆಗೆ ಯಾವುದೇ ಕ್ರಮ ಏಕೆ ಕೈಗೊಳ್ಳಲಾಗಿಲ್ಲ ಹಾಗೂ ಪೊಲೀಸರಿಗೆ ದೂರು ನೀಡಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಭಾಷಣ ಮುಗಿಸಿ ಪೊಕಳೆ ವೇದಿಕೆಯಿಂದ ಕೆಳಗಿಳಿಯುತ್ತಿದ್ದ ವೇಳೆ ಅಲ್ಲಿದ್ದ ಸುಮಾರು 8 ರಿಂದ 10 ಮಂದಿ ಅಪರಿಚಿತರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಕೈಯಿಂದ ಹೊಡೆದು, ಕುತ್ತಿಗೆ ಹಿಡಿದು, ಗಡ್ಡ ಹಾಗೂ ತಲೆ ಕೂದಲು ಎಳೆದು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದಿದ್ದಾರೆ. ಅಲ್ಲದೆ, ‘ಸ್ವಾಮೀಜಿಗಳ ವಿರುದ್ಧ ಮಾತನಾಡಿದರೆ ಜೀವಂತ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಜೀರೋ ಎಫ್ಐಆರ್ ಬಗ್ಗೆ ಒಂದಿಷ್ಟು: ಜೀರೋ ಎಫ್‌ಐಆರ್ (Zero FIR) ಎಂದರೆ, ಅಪರಾಧ ನಡೆದ ಸ್ಥಳದ ವ್ಯಾಪ್ತಿಗೆ ಸಂಬಂಧಿಸದ ಪೊಲೀಸ್ ಠಾಣೆಯಲ್ಲಿಯೂ ಮೊದಲ ಮಾಹಿತಿ ವರದಿ (FIR) ದಾಖಲಿಸಬಹುದಾದ ವ್ಯವಸ್ಥೆ. ಇದಕ್ಕೆ ಆರಂಭದಲ್ಲಿ ಪ್ರಕರಣ ಸಂಖ್ಯೆ ಬದಲಿಗೆ “0” (ಸೊನ್ನೆ) ನೀಡಲಾಗುವುದರಿಂದ ಇದನ್ನು ಜೀರೋ ಎಫ್‌ಐಆರ್ ಎಂದು ಕರೆಯಲಾಗುತ್ತದೆ.
ಜೀರೋ ಎಫ್‌ಐಆರ್‌ನ ಉದ್ದೇಶ ಅಪರಾಧದ ಸಂತ್ರಸ್ತರಿಗೆ ತಕ್ಷಣ ಕಾನೂನು ನೆರವು ದೊರಕಿಸುವುದು. ಠಾಣೆಯ ವ್ಯಾಪ್ತಿ (Jurisdiction) ನೆಪವೊಡ್ಡಿ ದೂರು ದಾಖಲಿಸಲು ವಿಳಂಬವಾಗದಂತೆ ನೋಡಿಕೊಳ್ಳುವುದು. ಗಂಭೀರ ಅಪರಾಧಗಳಲ್ಲಿ ತಕ್ಷಣ ತನಿಖೆಗೆ ಅಗತ್ಯ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸುವುದು.
ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ದೂರು ದಾಖಲಿಸಿದ ಬಳಿಕ, ತನಿಖೆ ನಡೆಸುವ ಅಧಿಕಾರ ಹೊಂದಿರುವ ಸಂಬಂಧಿತ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ.
ನಂತರ ಆ ಠಾಣೆಯು ನಿಯಮಾನುಸಾರ ಪ್ರಕರಣಕ್ಕೆ ಹೊಸ FIR ಸಂಖ್ಯೆ ನೀಡಿ ಮುಂದಿನ ತನಿಖೆ ಕೈಗೊಳ್ಳುತ್ತದೆ.
