ಕಾರವಾರ: ಇಂದು ಗುರುವಾರ ಬೆಳಗ್ಗೆ ಯಲ್ಲಾಪುರದ ಆರತಿಬೈಲ್ ಬಳಿಯ ರಾ.ಹೆ.52 ರಲ್ಲಿ ನಡೆದ ರಸ್ತೆ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರು ತಮ್ಮ ಸಾಮಾಜಿಕ ಜಾಲತಾಣ ‘X’ ನಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸಂಭವಿಸಿದ ದುರ್ಘಟನೆ ತೀವ್ರ ನೋವು ತಂದಿದೆ. ಈ ಕಠಿಣ ಸಮಯದಲ್ಲಿ ನನ್ನ ಸಹಾನುಭೂತಿ ಶೋಕತಪ್ತ ಕುಟುಂಬಗಳೊಂದಿಗಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪೊಸ್ಟ್ ಮಾಡಿದ್ದಾರೆ.
ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಬಳಗಾರ್ ಸಮೀಪ ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಪ್ರವಾಸಿಗರಿದ್ದ ತೂಫಾನ್ ಕ್ರೂಸರ್ ವಾಹನ ಹಾಗೂ ಲಾರಿಯ ನಡುವೆ ನಡೆದ ಈ ಭೀಕರ ಡಿಕ್ಕಿಯಲ್ಲಿ ಆರು ಜನ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.
ದುರಂತಕ್ಕೀಡಾದ ತೂಫಾನ್ ವಾಹನದಲ್ಲಿ (KA-19-AA-5920) ಚಾಲಕ ಸೇರಿ ಒಟ್ಟು ಒಂಬತ್ತು ಜನರಿದ್ದರು. ಮೃತಪಟ್ಟವರೆಲ್ಲರೂ ಧಾರವಾಡ ಮೂಲದವರಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಎಲ್ಲ ಗೆಳೆಯರು ಸೇರಿ ನಿನ್ನೆ ರಾತ್ರಿ ಧರ್ಮಸ್ಥಳ ಹಾಗೂ ಮಂಗಳೂರು ಕಡೆಗೆ ಪ್ರವಾಸ ಹೊರಟಿದ್ದ ಸಂದರ್ಭದಲ್ಲಿ ಅರಬೈಲ್ ಘಟ್ಟದ ತಿರುವಿನಲ್ಲಿ ಎದುರಿನಿಂದ ಬಂದ ಲಾರಿ (KA-22-AA-1008) ಇವರ ವಾಹನಕ್ಕೆ ದಾರುಣವಾಗಿ ಡಿಕ್ಕಿ ಹೊಡೆದಿತ್ತು.
