ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿಬೈಲ್ ಸಮೀಪದ ಬಳಗಾರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಒಟ್ಟು ಏಳಕ್ಕೇರಿದೆ.

ಧಾರವಾಡದಿಂದ ಧರ್ಮಸ್ಥಳ ಹಾಗೂ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ತೆರಳುತ್ತಿದ್ದ ಕ್ರೂಸರ್ (KA-19/AA-5920) ವಾಹನವು ಬೆಳಗಿನ ಜಾವ ಸುಮಾರು 1.30ರ ವೇಳೆಗೆ ಆರತಿಬೈಲ್ ಸಮೀಪದ ಬಳಗಾರ ಕ್ರಾಸ್ ಬಳಿ ಅಂಕೋಲಾದಿಂದ ಯಲ್ಲಾಪುರದತ್ತ ಬರುತ್ತಿದ್ದ ಲಾರಿ (KA-22/AA-1008)ಗೆ ಮುಖಾಮುಖಿ ಡಿಕ್ಕಿ ಹೊಡೆದಿತ್ತು.
ಕ್ರೂಸರ್ ಚಾಲಕ ಸಂಜೀವ ಮೈಲಾರ ಅಂಗಡಿ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಚಾಲಕ ಸೇರಿದಂತೆ ಒಟ್ಟು ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಗಾಯಗೊಂಡಿದ್ದ ನರಗುಂದ ತುಪ್ಪದಕುರಹಟ್ಟಿಯ ಶಿವರಾಜ ಗುರಪ್ಪ ಮಡಿವಾಳ (22), ಧಾರವಾಡ ಮೆಹಬೂಬ ನಗರದಸಚಿನ್ (26), ಕಲಘಟಗಿಯ ಚನ್ನಬಸು ಬಸಲಿಂಗಯ್ಯ ಸಂಪಗಾಂವಿಮಠ (28) ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಚಿನ್ (26)ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಸಾವನ್ನಪ್ಪಿದ್ದಾನೆ.
ಮೃತರನ್ನು ಧಾರವಾಡ ಕುರುಬಗಟ್ಟಿಯ ಸಂಜೀವ ಮೈಲಾರ ಅಂಗಡಿ (33), ಧಾರವಾಡದ ಸಾಧನಕೇರಿಯ ಬೇಂದ್ರೆ ಭವನದ ಬಳಿಯ ಅಕ್ಷಯ ತೇಜಪ್ಪ ಮುರಳವರ (26), ಧಾರವಾಡ ಜಯನಗರದ ಅಭೀಷೇಕ ಈಶ್ವರ (28), ಧಾರವಾಡ ಸಪ್ತಾಪುರದ ಅಭಿಷೇಕ ಮಲ್ಲೇಶ ಮಡಬಾವಿ (27), ಧಾರವಾಡದ ಜೆಎಸ್‌ಎಸ್ ಕ್ಯಾಂಪ್ ಬಳಿಯ ಬಸಪ್ಪ ದೇವಪ್ಪ ಕನಕನವರ (38), ಧಾರವಾಡದ ಮುರುಘಾಮಠ ಬಳಿಯ
ಮಂಜುನಾಥ ಅಶೋಕ ಚುಳಕಿ (33) ಸಾವನ್ನಪ್ಪಿದವರು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ, ಎಸ್ಪಿ ದೀಪನ್ ಎಂ.ಎನ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
