Kumta| ಮಟನ್ ಬಿರ್ಯಾನಿ ಗುಣಮಟ್ಟದ ಬಗ್ಗೆ ಪ್ರಶ್ನಿಸಿದ ಮೂವರು ಗ್ರಾಹಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನ ಹೊಟೆಲ್ ಸಿಬ್ಬಂದಿಗಳು ಸೇರಿ ಕೈಯಿಂದ ಹೊಡೆದು, ದೂಡಾಡಿ ಕೊನೆಗೆ ಅಡುಗೆ ಸೌಟಿನಿಂದ ಹಲ್ಲೆ ನಡೆಸಿದ ಘಟನೆ ಇಲ್ಲಿನ ವರದಾ ಬಾರ್ & ರೆಸ್ಟೋರೆಂಟ್‌ನಲ್ಲಿ ನಡೆದಿದೆ.
ಶಶಿಹಿತ್ತಲಿನ ಮೂರ್ತಿ ಮಾಸ್ತಿ ಹರಿಕಂತ್ರ, ಸೂರಜ್ ಮಹಾದೇವ ಶಶಿಹಿತ್ತಲ ಹಾಗೂ ಪಾಂಡುರಂಗ ರಾಮನಾಥ ಹರಿಕಂತ್ರ ಎಂಬುವವರೇ ಹಲ್ಲೆಗೊಳಗಾದವರು.
ಘಟನೆಯ ವಿವರ: ಶುಕ್ರವಾರ ಜೂನ್ 5ರಂದು ಮಧ್ಯಾಹ್ನ ಮೂರ್ತಿ ಹಾಗೂ ಅವರ ಸ್ನೇಹಿತರಾದ ಸೂರಜ್ ಮತ್ತು ಪಾಂಡುರಂಗ ಅವರು ಕುಮಟಾದ ವರದಾ ಬಾರ್ & ರೆಸ್ಟೋರೆಂಟ್ ಗೆ ಹೋಗಿ ಒಂದೊಂದು ಬೀಯರ್ ಕುಡಿದು ನಂತರ ಮಟನ್ ಬಿರಿಯಾನಿ ಊಟ ಮಾಡುತ್ತಿರುವಾಗ, ನಿಮಗೆ ಮಟನ್ ಬಿರಿಯಾನಿ ಸರಿಯಾಗಿ ಮಾಡಲು ಬಂದಿರುವುದಿಲ್ಲ ಎಂದು ವೇಟರ್ ಗೆ ಹೇಳಿದ್ದಾರೆ. ಆಗ ವೇಟರ್ ರೆಸ್ಟೋರೆಂಟ್ ಮ್ಯಾನೇಜರ್ ಉದಯ ಗೋವಿಂದ ನಾಯ್ಕನಿಗೆ ಗ್ರಾಹಕರು ಊಟದ ಬಗ್ಗೆ ಕಂಪ್ಲೇಂಟ್ ಮಾಡ್ತಿದ್ದಾರೆ ಎಂದು ಹೇಳಿ, ಆತನನ್ನು ಕರೆದುಕೊಂಡು ಬಂದಿದ್ದಾನೆ. ಆದರೆ ಸ್ಥಳಕ್ಕೆ ಬಂದ ಮ್ಯಾನೇಜರ್ ಗ್ರಾಹಕರ ಕಂಪ್ಲೇಂಟ್ ಕೇಳುವ ಬದಲು, ದೂರು ನೀಡಿದ ಗ್ರಾಹಕರ ಮೇಲೆಯೇ ಹರಿಹಾಯ್ದಿದ್ದಾನೆ. ಬೊ* ಮಕ್ಕಳಾ… ಸೂ* ಮಕ್ಕಳಾ… ನೀವೆಲ್ಲಾ ಹೀಗೆ ಅಂತ ಅವಾಚ್ಯ ಶಬ್ದಗಳಿಂದ ಏಕಾಏಕಿ ಬೈದು ಕೂಗಾಡಿದ್ದಾನೆ. ಅಷ್ಟೇ ಅಲ್ಲದೇ ನಂತರ ಅಲ್ಲಿನ ಸುಮಾರು ಇಪ್ಪತ್ತರಿಂದ ಮೂವತ್ತು ಜನ ಕೆಲಸಗಾರನ್ನು ಸಹ ಕರೆಯಿಸಿ, ಮೂವರ ಮೇಲೆಯೂ ಕೈಯಿಂದ ಹೊಡೆದು, ದೂಡಾಡಿ ಹಲ್ಲೆ ನಡೆಸಿದ್ದಾರೆ. ಅದರಲ್ಲೊಬ್ಬ ಅಡುಗೆ ಮಾಡುವ ಸೌಟ್ ನಿಂದಲೇ ಮೂರ್ತಿ ಹರಿಕಂತ್ರ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ.
ಅಡುಗೆ ಸೌಟ್‌ನಿಂದ ಹೊಡೆದ ಪರಿಣಾಮ ಮೂರ್ತಿ ಹರಿಕಂತ್ರ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಗ್ರಾಹಕರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ವರದಾ ಬಾರ್ & ರೆಸ್ಟೋರೆಂಟಿನ ಮ್ಯಾನೇಜರ್ ಉದಯ ಗೋವಿಂದ ನಾಯ್ಕ ಸೇರಿದಂತೆ ಶ್ರೀಧರ ನಾಯ್ಕ, ನಾರಾಯಣ ಗೌಡ, ಬಾಬು ಹಾಗೂ ಇತರ 20 ರಿಂದ 30 ಜನರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
