ನವದೆಹಲಿ: ವಿದೇಶಿ ಮೂಲದ ಅಡಿಕೆಯನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಿ, ಅದರಿಂದ ಬಂದ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ( Money laundering) ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ನಾಲ್ಕು ರಾಜ್ಯಗಳ 20 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆಸಿದೆ.
ಅಸ್ಸಾಂ, ಮಿಜೋರಾಂ, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದ ವಿವಿಧ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದು, ಈ ಪ್ರಕರಣದ ತನಿಖೆಯನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (Prevention of Money Laundering Act), 2002 ಅಡಿಯಲ್ಲಿ ಕೈಗೊಂಡಿದ್ದಾರೆ.
ಅಸ್ಸಾಂನಲ್ಲಿ ದಾಖಲಾಗಿದ್ದ ಹಲವು ಎಫ್‌ಐಆರ್‌ಗಳು ಹಾಗೂ ಅಕ್ರಮ ಅಡಿಕೆ ಸಾಗಣೆ ಮತ್ತು ಕಸ್ಟಮ್ಸ್ ಸುಂಕ ವಂಚನೆ ಪ್ರಕರಣಗಳ ಆಧಾರದ ಮೇಲೆ ತನಿಖೆ ಆರಂಭಿಸಲಾಗಿದೆ. ಈ ಹಿಂದೆ ಆದಾಯ ಗುಪ್ತಚರ ನಿರ್ದೇಶನಾಲಯ (Directorate of Revenue Intelligence) 655 ಮೆಟ್ರಿಕ್ ಟನ್‌ಗಿಂತ ಹೆಚ್ಚು ವಿದೇಶಿ ಮೂಲದ ಅಡಿಕೆ ಹಾಗೂ ಸಾಗಣೆಗೆ ಬಳಸಿದ್ದ ವಾಹನಗಳನ್ನು ವಶಪಡಿಸಿಕೊಂಡಿತ್ತು.
ಇಡಿ ತನಿಖೆಯ ಪ್ರಕಾರ, ಮ್ಯಾನ್ಮಾರ್‌ನಿಂದ ಮಿಜೋರಾಂ ರಾಜ್ಯದ ಚಾಂಫೈ–ಜೋಖಾವ್ತಾರ್ ಮಾರ್ಗದ ಮೂಲಕ ಅಕ್ರಮವಾಗಿ ಅಡಿಕೆ ಸಾಗಣೆ ಮಾಡಲಾಗುತ್ತಿತ್ತು. ಮಿಜೋರಾಂನ ಪೂರೈಕೆದಾರರು, ಅಸ್ಸಾಂನ ಮಧ್ಯವರ್ತಿಗಳು, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ಹಣಕಾಸು ಪೂರೈಕೆದಾರರು ಹಾಗೂ ಸರಕು ಸ್ವೀಕರಿಸುವವರು ಸೇರಿ ಸಂಘಟಿತ ಜಾಲ ಕಾರ್ಯನಿರ್ವಹಿಸುತ್ತಿತ್ತು ಎಂದು ಆರೋಪಿಸಲಾಗಿದೆ.
ಅಕ್ರಮ ಸಾಗಣೆಯನ್ನು ಮುಚ್ಚಿಹಾಕಲು ನಕಲಿ ಜಿಎಸ್‌ಟಿ ಬಿಲ್‌ಗಳು, ಕೃತಕ ಸಂಸ್ಥೆಗಳು ಹಾಗೂ ಸುಳ್ಳು ಸಾರಿಗೆ ದಾಖಲೆಗಳನ್ನು ಬಳಸಲಾಗುತ್ತಿತ್ತು ಎಂದು ಇಡಿ ತಿಳಿಸಿದೆ. ತನಿಖೆಯಲ್ಲಿ ₹1,500 ಕೋಟಿಗೂ ಅಧಿಕ ಅಕ್ರಮ ಹಣದ ವಹಿವಾಟು ನಡೆದಿರುವುದು ಪತ್ತೆಯಾಗಿದ್ದು, ಶೆಲ್ ಕಂಪನಿಗಳು ಹಾಗೂ ಮಧ್ಯವರ್ತಿ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಇಡಿ ಆರೋಪಿಸಿದೆ.
ದಾಳಿಯ ವೇಳೆ ಮಹತ್ವದ ದಾಖಲೆಗಳು, ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ₹1.30 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ 33 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಕ್ರಮ ಹಣವನ್ನು ದೇಶದ ವಿವಿಧ ನಗರಗಳಲ್ಲಿನ ರಿಯಲ್ ಎಸ್ಟೇಟ್ ಹೂಡಿಕೆಗಳಿಗೆ ಬಳಸಿರುವ ಶಂಕೆಯೂ ವ್ಯಕ್ತವಾಗಿದೆ. ಇಡಿ ತನಿಖೆ ಮುಂದುವರಿದಿದೆ.
