Dandeli| ತಾಲ್ಲೂಕಿನ ಅಂಬಿಕಾನಗರ ಪವರ್ ಹೌಸ್ ಸಮೀಪ ಬೆಳಗಿನ ಜಾವ ಕರಡಿಯೊಂದು ರಸ್ತೆಯಲ್ಲಿ ಸಂಚರಿಸಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇಂದು ಶನಿವಾರ ಬೆಳಗ್ಗೆ ಸುಮಾರು 6 ಗಂಟೆ ವೇಳೆಗೆ ಕಾಡಿನಿಂದ ಬಂದ ಕರಡಿಯೊಂದು ಮುಖ್ಯ ರಸ್ತೆಯಲ್ಲಿ ಓಡಾಡುತ್ತಿರುವುದು ವಾಹನ ಸವಾರರ ಗಮನಕ್ಕೆ ಬಂದಿದೆ. ರಸ್ತೆಯಲ್ಲಿ ನಿರಾಳವಾಗಿ ಸಾಗುತ್ತಿದ್ದ ಕರಡಿಯ ಎದುರಿಗೆ ವಾಹನವೊಂದು ಬಂದಾಗ ಗಾಬರಿಗೊಂಡ ಅದು ತಕ್ಷಣ ಹಿಂದಿರುಗಿ ರಸ್ತೆಯಲ್ಲೇ ಓಡಿದೆ.
ಈ ಅಪರೂಪದ ದೃಶ್ಯವನ್ನು ವಾಹನದಲ್ಲಿದ್ದವರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಕರಡಿ ರಸ್ತೆಯಲ್ಲಿ ಓಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಾಂಡೇಲಿ ಸುತ್ತಮುತ್ತ ದಟ್ಟ ಅರಣ್ಯ ಪ್ರದೇಶ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚಾಗಿದೆ. ಆಹಾರ ಅರಸಿ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಬರುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕರಡಿ ಸೇರಿದಂತೆ ವನ್ಯಜೀವಿಗಳ ಚಲನವಲನದ ಬಗ್ಗೆ ಅರಣ್ಯ ಇಲಾಖೆ ನಿಗಾ ವಹಿಸಿ, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
