Karwar| ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದ ಕರಾವಳಿ‌ ಜಿಲ್ಲೆಗಳಲ್ಲಿ ಜುಲೈ 1, 2, 5, 6 ಹಾಗೂ 7 ರಂದು ಅತಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

ಈ ದಿನಗಳಲ್ಲಿ ಜಿಲ್ಲೆಯ ಹಲವೆಡೆ 204.5 ಮಿ.ಮೀ.ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ನದಿ, ಹೊಳೆ, ತಗ್ಗು ಪ್ರದೇಶಗಳು ಹಾಗೂ ಗುಡ್ಡಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಅಗತ್ಯವಿಲ್ಲದಿದ್ದರೆ ಪ್ರವಾಸ, ನದಿ-ಸಮುದ್ರ ತೀರ ಹಾಗೂ ಗುಡ್ಡ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸುವಂತೆ ಸೂಚಿಸಲಾಗಿದೆ.

ತುರ್ತು ಪರಿಸ್ಥಿತಿ ಎದುರಾದಲ್ಲಿ ಸ್ಥಳೀಯ ಆಡಳಿತ ಹಾಗೂ ವಿಪತ್ತು ನಿರ್ವಹಣಾ ಇಲಾಖೆಯ ಸೂಚನೆಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.