Mundagod| ಸಮಾಜದ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ರೌಡಿ ಶೀಟರ್‌ಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಮುಂದುವರಿಸಿದೆ. ಅದರ ಭಾಗವಾಗಿ ಮುಂಡಗೋಡ ತಾಲೂಕಿನ ಬಸಾಪುರ ನಿವಾಸಿ ರೌಡಿ ಶೀಟರ್ ಮಧುಸಿಂಗ್ ಗಂಗಾರಾಮಸಿಂಗ್ ರಜಪೂತ (31) ನನ್ನು ಉತ್ತರ ಕನ್ನಡ ಜಿಲ್ಲೆಯಿಂದ ಮಂಡ್ಯ ಜಿಲ್ಲೆಯ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

ಮಧುಸಿಂಗ್ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದರೋಡೆ ಸೇರಿದಂತೆ ಗಂಭೀರ ಸ್ವರೂಪದ ಎರಡು ಅಪರಾಧ ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, ಮತ್ತೊಂದು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಪೊಲೀಸರ ಪ್ರಕಾರ, ಆತ ತನ್ನ ಅಪರಾಧ ಹಿನ್ನೆಲೆಯನ್ನು ದುರುಪಯೋಗ ಪಡಿಸಿಕೊಂಡು ದರೋಡೆ ಹಾಗೂ ಅಕ್ರಮ ಬಡ್ಡಿ ವ್ಯವಹಾರಗಳಲ್ಲಿ ತೊಡಗಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ. ಇದರಿಂದ ಸಾರ್ವಜನಿಕರ ಶಾಂತಿ, ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಮುಂಡಗೋಡ ಪೊಲೀಸ್ ಠಾಣೆ ವತಿಯಿಂದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಗಡಿಪಾರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿ ಎರಡೂ ಪಕ್ಷಗಳ ವಾದ ಆಲಿಸಿದ ಬಳಿಕ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55(ಎ) ಮತ್ತು 55(ಬಿ) ಅಡಿಯಲ್ಲಿ ಮಧುಸಿಂಗ್ ನನ್ನು 2026ರ ಡಿಸೆಂಬರ್ 26ರವರೆಗೆ ಉತ್ತರ ಕನ್ನಡ ಜಿಲ್ಲೆಯಿಂದ ಮಂಡ್ಯ ಜಿಲ್ಲೆಯ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡುವಂತೆ ಆದೇಶಿಸಲಾಗಿದೆ.

ಆದೇಶದ ಅನ್ವಯ ಮುಂಡಗೋಡ ಪೊಲೀಸರು ಮಧುಸಿಂಗ್ ನನ್ನು ಮಂಡ್ಯ ಜಿಲ್ಲೆಯ ಪಶ್ಚಿಮ ಪೊಲೀಸ್ ಠಾಣೆ ಅಧಿಕಾರಿಗಳ ವಶಕ್ಕೆ ಒಪ್ಪಿಸಿ ಗಡಿಪಾರು ಆದೇಶವನ್ನು ಜಾರಿಗೊಳಿಸಿದ್ದಾರೆ.