Mallapur| ಸಿಮೆಂಟ್ ರಸ್ತೆ ಕಾಮಗಾರಿ ವೇಳೆ ಕಾಂಕ್ರೀಟ್ ಮಿಕ್ಸರ್ ವಾಹನ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಮಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತನನ್ನು ಬೆಳಗಾವಿ ಮೂಲದ ಬಸವರಾಜ ತಂದೆ ಖಾನಪ್ಪ ಮಲ್ಲೂರು (47) ಎಂದು ಗುರುತಿಸಲಾಗಿದೆ. ತಾಲೂಕಿನ ಮಲ್ಲಾಪುರದ ನಂದಿ ಅಸೋಸಿಯೇಟ್ಸ್ ಕಂಪನಿ ವತಿಯಿಂದ ಎನ್‌ಪಿಸಿಐಎಲ್ ಕೈಗಾ ವಸತಿ ಗೃಹಗಳಿಗೆ ಸಿಮೆಂಟ್ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಶುಕ್ರವಾರ ಮಧ್ಯಾಹ್ನ ಸುಮಾರು 12.50ರ ವೇಳೆಗೆ ಕೆಎ-51/ಎಂಆರ್-6831 ಸಂಖ್ಯೆಯ ಅಜೇಕ್ಸ್ ವಾಹನದ ಚಾಲಕ ಚಂದು ಅಶೋಕಪ್ಪ ವಾಹನವನ್ನು ನಿರ್ಲಕ್ಷ್ಯದಿಂದ ಹಿಮ್ಮುಖವಾಗಿ ಚಲಾಯಿಸಿದ ವೇಳೆ ಅಲ್ಲೇ ರಸ್ತೆ ಕೆಲಸ ಮಾಡುತ್ತಿದ್ದ ಬಸವರಾಜ ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಸವರಾಜ ಅವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿ, ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ನೀಡಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲಿಸರು ತನಿಖೆ ಕೈಗೊಂಡಿದ್ದಾರೆ.
